ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಾವು ಪೂಜಿಸುವ ದೇವರು ನಿರಾಕಾರ ಸ್ವರೂಪನಾಗಿದ್ದಾನೆ. ಆದರೆ ಮಾನವನು ಆಯಾ ದೇವರುಗಳ ಗುಣ ವಿಶೇಷತೆಗಳ ಆಧಾರದ ಮೇಲೆ, ಪುರಾಣದ ಕಥೆಗಳ ಆಧಾರದಿಂದ ಅವನಿಗೆ ವಿವಿಧ ರೀತಿಯ ಆಕಾರಗಳನ್ನು ನೀಡಿ ಪೂಜಿಸುತ್ತಿರುವುದು ನಮ್ಮ ಹಿಂದೂ ಪದ್ಧತಿಯಲ್ಲಿ ಹಿಂದಿನಿಂದಲೂ ಸಾಗಿ ಬಂದ ಸಂಪ್ರದಾಯವಾಗಿದೆ. ಅದರಲ್ಲಿಯೂ ಶ್ರೀ ವೀರಭದ್ರ ದೇವರನ್ನು ಅತ್ಯಂತ ಉಗ್ರ ದೇವರು ಎಂದೇ ನಂಬಿ, ಭಯ-ಭಕ್ತಿಗಳಿಂದ ಅವನನ್ನು ಪೂಜಿಸುತ್ತ ಬಂದಿದ್ದೇವೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಹಿರೇಮಠದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನರೇಗಲ್ಲ ಹಿರೇಮಠಕ್ಕೆ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಪೀಠಾಧಿಪತಿಗಳಾದ ನಂತರ ನರೇಗಲ್ಲ ಹಿರೇಮಠ ಮತ್ತು ನರೇಗಲ್ಲದ ಕೀರ್ತಿ ಇಡೀ ನಾಡಿನ ತುಂಬ ಹಬ್ಬಿರುವುದು ಸಂತಸದ ಸಂಗತಿ. ಸಿದ್ಧಾಂತ ಶಿಖಾಮಣಿ ಪ್ರವಚನವನ್ನು ಹೇಳುವುದರಲ್ಲಿ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ನಾಡಿನಲ್ಲಿಯೇ ಹೆಸರುವಾಸಿಯಾಗಿದ್ದಾರೆ. ಇದು ನಮಗೆಲ್ಲರಿಗೂ ಹೆಮ್ಮೆ ಮತ್ತು ಅಭಿಮಾನದ ವಿಷಯವಾಗಿದೆ. ಶ್ರೀಗಳವರು ಯೋಜಿಸುವ ಪ್ರತಿ ಕಾರ್ಯಕ್ರಮಕ್ಕೂ ಭಕ್ತರು ಹೆಚ್ಚಿನ ಉತ್ತೇಜನವನ್ನು ನೀಡಬೇಕು ಎಂದರು.
ಯುವ ಧುರೀಣ ಅಕ್ಷಯ ಪಾಟೀಲ ಮಾತನಾಡಿ, ಸಾಧು-ಸಂತರ ಸಂಗಡ ಸಮಯ ಕಳಿಯುವುದನ್ನೇ ಸತ್ಸಂಗ ಎನ್ನುತ್ತಾರೆ. ಇಂತಹ ಸತ್ಸಂಗ ಶ್ರೀ ಹಿರೇಮಠದ ಜಾತ್ರಾ ಮಹೋತ್ಸವದ ನೆಪದಲ್ಲಿ ಪ್ರತಿ ವರ್ಷ ದೊರಕುತ್ತಿರುವುದಕ್ಕೆ ನಾವೆಲ್ಲರೂ ಭಾಗ್ಯಶಾಲಿಗಳು. ಶ್ರೀ ವೀರಭದ್ರೇಶ್ವರ ಚರಿತಾಮೃತವನ್ನು ಆಲಿಸಿ, ಶ್ರೀ ವೀರಭದ್ರೇಶ್ವರನ ಗುಣಗಳನ್ನು ಪ್ರಸಂಗ ಬಂದಾಗ ಜೀವನದಲ್ಲಿ ಪ್ರದರ್ಶಿಸಬೇಕೆಂದು ಹೇಳಿದರು.
ಸಭೆಯನ್ನುದ್ದೇಶಿಸಿ ಡಾ. ಕೆ.ಬಿ. ಧನ್ನೂರ, ಶಿವನಗೌಡ ಪಾಟೀಲ ಮಾತನಾಡಿದರು. ವೇದಿಕೆಯ ಮೇಲೆ ಮೈಲಾರಪ್ಪ ಚಳ್ಳಮರದ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಫಕ್ರುಸಾಬ ರೇವಡಿಗಾರ, ಖಾದರಬಾಷಾ ಹೂಲಗೇರಿ, ಅಲ್ಲಾಬಕ್ಷಿ ನದಾಫ್, ಶೇಖಪ್ಪ ಜುಟ್ಲ ಇನ್ನಿತರರಿದ್ದರು.
ಷ.ಬ್ರ.ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿ, ನಿನ್ನೆಯ ದಿನ ಶ್ರೀ ವೀರಭದ್ರ ದೇವರು-ಭದ್ರಕಾಳಿ ಅಮ್ಮನವರ ಮದುವೆಯನ್ನು ಅತ್ಯಂತ ಸಡಗರ-ಸಂಭ್ರಮಗಳಿಂದ ಮಾಡಿದ್ದೀರಿ ಎಂದು ತಿಳಿಸಿ, ನಂತರ ಅವರಿಬ್ಬರೂ ಸೇರಿ ಈ ಜಗತ್ತಿನ ಕಲ್ಯಾಣವನ್ನು ಹೇಗೆ ಮಾಡಿದರು, ದುಷ್ಟರನ್ನೆಲ್ಲ ಹೇಗೆ ಸೆದೆಬಡಿದರು ಎಂಬುದರ ವಿವರಣೆಯನ್ನು ನೀಡಿದರು.


