ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜಮುಖಿ ಚಿಂತನೆ, ಹೊಸತನ, ಆಕರ್ಷಣೆಯೊಂದಿಗೆ ಮುದ್ರಣಗೊಂಡಿರುವ `ಆಸ್ಕ್ ನ್ಯೂಸ್’ 2026ರ ವರ್ಣರಂಜಿತ ಪಾಕೆಟ್ ಕ್ಯಾಲೆಂಡರ್ ಎಲ್ಲರಂತಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಅಭಿಪ್ರಾಯಪಟ್ಟರು.
ಅವರು ಆಸ್ಕ್ ನ್ಯೂಸ್ 2026ರ ವರ್ಣರಂಜಿತ ಪಾಕೆಟ್ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಪೇಪರ್‌ಲೆಸ್ ವ್ಯವಸ್ಥೆಯ ಮಧ್ಯೆ ಡಿಜಿಟಲ್ ಯುಗದಲ್ಲಿ ತೂಗು ಕ್ಯಾಲೆಂಡರ್ ಸೇರಿ ಬೇರೆ ಬೇರೆ ಕ್ಯಾಲೆಂಡರ್‌ಗಳು ಹೊಂದಿರುವ ಎಲ್ಲ ಮಾಹಿತಿಯನ್ನು ಸೆರೆ ಹಿಡಿಯುವ ಜೊತೆಗೆ ಅತ್ಯಮೂಲ್ಯ ಚಿಂತಕರ ಸುಭಾಷಿತ ವಿಚಾರಗಳನ್ನು ಅಳವಡಿಸಿರುವ ಪಾಕೆಟ್ ಕ್ಯಾಲೆಂಡರ್ ನಿಜಕ್ಕೂ ಮಾದರಿಯಾಗಿದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಹಿರಿಯ ನಿಕಟಪೂರ್ವ ಉಪಾಧ್ಯಕ್ಷ ರವಿ ಎಲ್.ಗುಂಜೀಕರ ಮಾತನಾಡಿ, ಹೊಸ ಯೋಜನೆಗೆ, ಯೋಚನೆಗೆ, ಆಲೋಚನೆಗೆ, ಸಾಮಾಜಿಕ ಚಿಂತನೆಗೆ ಮಾದರಿಯಾಗಿರುವ ಆಸ್ಕ್ ನ್ಯೂಸ್ ಚಾನಲ್ ಹೊರತಂದಿರುವ 2026ರ ಪಾಕೆಟ್ ಕ್ಯಾಲೆಂಡರ್ ಅತ್ಯಂತ ಅರ್ಥಗರ್ಭಿತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಖ್ಯಾತ ಹೋಮಿಯೋಪತಿ ವೈದ್ಯ ಡಾ. ಎಸ್.ವ್ಹಿ. ಶಿವನಗೌಡರ ಮಾತನಾಡಿ, ಅಂದವಾಗಿ ಮೂಡಿಬಂದಿರುವ ಆಸ್ಕ್ ನ್ಯೂಸ್ 2026ರ ವರ್ಣರಂಜಿತ ಪಾಕೆಟ್ ಕ್ಯಾಲೆಂಡರ್ ಇತರರಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ ಆನಂದ ಸಾಲಿಗ್ರಾಮ ಮಾತನಾಡಿ, ಹಿಂದೆ ಜನಪ್ರಿಯವಾಗಿದ್ದ ಪಾಕೆಟ್ ಕ್ಯಾಲೆಂಡರ್ ಇತ್ತೀಚೆಗೆ ಮರೆಯಾಗಿತ್ತು. ಮತ್ತೆ ಪಾಕೆಟ್ ಕ್ಯಾಲೆಂಡರ್ ಟ್ರೆಂಡ್‌ಗೆ ಆಸ್ಕ್ ನ್ಯೂಸ್ ಮುನ್ನುಡಿ ಬರೆದಂತಿದೆ ಎಂದರು.
ರೈಜ್ ಆಫ್ ಗದಗ ಸಂಪಾದಕ ಆನಂದಯ್ಯ ವಿರಕ್ತಮಠ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆಸ್ಕ್ ನ್ಯೂಸ್ ಸಂಪಾದಕ ಡಾ. ಅನಂತ ಎಸ್.ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ನ್ಯಾಯವಾದಿ ಟಿ.ಎನ್. ಭಾಂಡಗೆ ವಂದಿಸಿದರು.
ಗಣ್ಯ ವರ್ತಕರಾದ ಈಶ್ವರಸಾ ಮೇರವಾಡೆ ಮಾತನಾಡಿ, ತಮ್ಮ ಪರಿಚಯ, ಬ್ಲಡ್ ಗ್ರುಪ್, ಕಚೇರಿ, ಮನೆ ವಿಳಾಸ, ವಾಹನ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಸೇರಿ ತಮ್ಮ ಬಯೋಡಾಟಾವನ್ನು ಪಾಕೆಟ್ ಕ್ಯಾಲೆಂಡರ್‌ನಲ್ಲಿ ಅಳವಡಿಸಿಕೊಳ್ಳುವಂತೆ ವ್ಯವಸ್ಥೆ ಹೊಂದಿರುವ ಆಸ್ಕ್ ನ್ಯೂಸ್ 2026ರ ಪಾಕೆಟ್ ಕ್ಯಾಲೆಂಡರ್ ಉಪಯುಕ್ತವಾಗಿದೆ ಎಂದರು.



