ಬೆಂಗಳೂರು:- ಬಿಜೆಪಿಯವರು RSSನ ಗುಲಾಮರಾಗಿದ್ದಾರೆ ಎಂದು ಹೇಳುತ್ತಲೇ ಸಚಿವ ಪ್ರಿಯಾಂಕ ಖರ್ಗೆ ಅವರು ವಾಗ್ದಾಳಿ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವ್ರು ಆರ್‌ಎಸ್‌ಎಸ್‌ನ ಗುಲಾಮರು. ಒಂದು ತಿಂಗಳಿಂದ ಪಥಸಂಚಲನ ಜಟಾಪಟಿ ನಡೀತಿದೆ. ಒಂದು ತಿಂಗಳ ನಂತರ ನಿನ್ನೆ ಅದರ ಮುಖ್ಯಸ್ಥರು ಮಾತಾಡಿದ್ದಾರೆ. ಆದರೆ, ಬಿಜೆಪಿಯವ್ರು ಒಂದು ತಿಂಗಳಿಂದ ಬೀದಿಯಲ್ಲಿ ಮಾತಾಡ್ತಿದ್ದಾರೆ. ಆರ್‌ಎಸ್‌ಎಸ್ ಪರ ಮಾತಾಡದಿದ್ರೆ ಬಿಜೆಪಿ ನಾಯಕರಿಗೆ ಟಿಕೆಟ್ ಸಿಗಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ಇನ್ನೂ ಆಗಿಲ್ಲ ಯಾಕೆ? ಆರ್‌ಎಸ್‌ಎಸ್ ಅನುಮತಿ ಕೊಟ್ಟಿಲ್ಲ ಎಂದು ಲೇವಡಿ ಮಾಡಿದರು.
ಆರ್‌ಎಸ್‌ಎಸ್ ಅನ್ನು ಇಡೀ ಸಮಾಜ ಒಪ್ಪಿಲ್ಲ, ಇಡೀ ದೇಶ ಒಪ್ಪಿಲ್ಲ. ಎಲ್ಲರೂ ಒಪ್ಪಿದ್ದಾರೆ ಅನ್ನೋ ಭಾವನೆ ಸರಿಯಲ್ಲ. ಸರ್ಕಾರಿ ಜಾಗಗಳಲ್ಲಿ ಚಟುವಟಿಕೆ ಮಾಡೋ ಹಾಗಿಲ್ಲ, ಅನುಮತಿ ತಗೋಬೇಕು. ನಾವು ಆರ್‌ಎಸ್‌ಎಸ್‌ನ ಆಳು ಮಕ್ಕಳು ಅಲ್ಲ. ದೊಡ್ಡ ಸಂಘಟನೆ ಅಂತಾರೆ, ಯಾಕೆ ಇನ್ನೂ ಆರ್‌ಎಸ್‌ಎಸ್ ನೋಂದಣಿ ಆಗಿಲ್ಲ? ಇವರಿಗೊಂದು ನ್ಯಾಯ ನಮಗೊಂದು ನ್ಯಾಯನಾ? ಪಥಸಂಚಲನ ಏನಕ್ಕೆ ಮಾಡಬೇಕು? ಅದರ ಅಗತ್ಯ ಏನು? ಪಥಸಂಚಲನ ಮಾಡಬೇಕಾದರೆ ಅನುಮತಿ ತಗೋಬೇಕಲ್ಲ? ನೋಂದಣಿ ಆಗದೇ ಹೇಗೆ ಅನುಮತಿ ಪಡೀತಾರೆ ಎಂದು ಪ್ರಶ್ನಿಸಿದರು.
ಖಾಸಗಿ ಜಾಗ, ನಿಮ್ಮವರ ಒಡೆತನದ ಜಾಗಗಳಲ್ಲಿ ಪಥಸಂಚಲನ ಮಾಡಿಕೊಳ್ಳಿ. ದೇಶ ಸಂಸ್ಕೃತಿ, ಐಕ್ಯತೆಗೆ ದುಡೀತಿದ್ರೆ ಇದೆಲ್ಲ ಅಗತ್ಯ ಏನು? ದೊಣ್ಣೆ ಹಿಡಿದುಕೊಂಡೇ ಪಥಸಂಚಲನ ಮಾಡಬೇಕು ಅನ್ನೋದೇನು? ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಿಗೆ ವೇತನ ಅಥವಾ ಗೌರವಧನ ಕೊಡ್ತಿದ್ದಾರಲ್ಲ, ಹೇಗೆ, ಎಲ್ಲಿಂದ ಕೊಡ್ತಿದ್ದಾರೆ? ಆರ್‌ಎಸ್‌ಎಸ್‌ನಲ್ಲಿ ಪಾರದರ್ಶಕತೆ ಯಾಕಿಲ್ಲ? ಯಾಕೆ ರಹಸ್ಯ ಕಾಪಾಡ್ತಾರೆ? ಆದಾಯ, ದೇಣಿಗೆ ಯಾರು ಕೊಡ್ತಾರೆ? ಎಲ್ಲಿಂದ ಬರುತ್ತೆ? ನಿತ್ಯದ ಖರ್ಚುಗಳನ್ನು ಆರ್‌ಎಸ್‌ಎಸ್ ಹೇಗೆ ನಿರ್ವಹಿಸುತ್ತೆ? ಇದನ್ನೆಲ್ಲ ನಾವು ಕೇಳಬಾರದಾ? ನೋಂದಾಯಿತ ಸಂಸ್ಥೆ, ಸಂಘಟನೆಗಳು ಆರಾರು ತಿಂಗಳಿಗೆ ಲೆಕ್ಕದ ವರದಿ ಕೊಡಬೇಕು. ಇವರು ಕೊಡ್ತಾರಾ? ಆರ್‌ಎಸ್‌ಎಸ್ ಆಫ್ಟ್ರಾಲ್ ಒಂದು ಎನ್‌ಜಿಒ, ಅದರ ಮುಖ್ಯಸ್ಥರಿಗೆ ಯಾಕೆ ಅಷ್ಟೊಂದು ಭದ್ರತೆ? ಪಥಸಂಚಲನ ಹಾಗೇ ಮಾಡ್ತೇವೆ, ಹೀಗೇ ಮಾಡ್ತೇವೆ ಅಂತಾರೆ, ನಾವೇನು ಆರ್‌ಎಸ್‌ಎಸ್ ಗುಲಾಮರಾ ಎಂದು ಕೆಂಡಕಾರಿದರು.


