ವಿಜಯಸಾಕ್ಷಿ ಸುದ್ದಿ, ಗದಗ: ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಆಗಿದ್ದು, ಸಮಾಜ ಬಾಂಧವರು, ರಾಜಕಾರಣಿಗಳು, ಮಠಾಧೀಶರು ಈ ಸಮಾಜ ಬಾಂಧವರಲ್ಲಿ ಇನ್ನಷ್ಟು ಒಗ್ಗಟ್ಟನ್ನು ಮೂಡಿಸಿ ಬಲಪಡಿಸುವ ಕಾರ್ಯ ಮಾಡಬೇಕೆಂದು ನಿವೃತ್ತ ಡಿಜಿ-ಐಜಿಪಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಡಾ. ಶಂಕರ ಬಿದರಿ ಮನವಿ ಮಾಡಿಕೊಂಡರು.
ಅವರು ಗದುಗಿನ ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ಗದಗ ಜಿಲ್ಲಾ ಕೆಪಿಟಿಸಿಎಲ್- ಹೆಸ್ಕಾಂ ವೀರಶೈವ ಲಿಂಗಾಯತ ನೌಕರರ ಸಂಘ ಏರ್ಪಡಿಸಿದ್ದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ಒಗ್ಗಟ್ಟು ಮತ್ತು ಸಂಘಟನೆ ಇಲ್ಲದ ಸಮಾಜ ಬಾಂಧವರನ್ನು ಮಹಾಸಭಾ ಈಗಾಗಲೇ ವೀರಶೈವ ಮತ್ತು ಲಿಂಗಾಯತ ಸಮಾಜಬಾಂಧವರಲ್ಲಿ ಒಗ್ಗಟ್ಟು ಮೂಡಿಸಿ ಅವರನ್ನು ಮಹಾಸಭಾದ ಮೂಲಕ ಸಂಘಟನೆಗೆ ಒಳಪಡಿಸಿ ಸಮಾಜವನ್ನು ಬಲಪಡಿಸುವ ಮಹಾನ್ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಈ ವಿಷಯವಾಗಿ ಇತ್ತೀಚೆಗೆ ನಮ್ಮನ್ನಗಲಿದ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ರಾಜಕೀಯ ಮುತ್ಸದ್ಧಿ ಶಾಮನೂರ ಶಿವಶಂಕರಪ್ಪ ಅವರು ಮಾಡಿದ ಪ್ರಯತ್ನ, ಪರಿಶ್ರಮವನ್ನು ಸಮಾಜ ಎಂದೆಂದಿಗೂ ಮರೆಯುವುದಿಲ್ಲ ಎಂದರು.
ಗುರು-ವಿರಕ್ತರು ಸಮಾಜವನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವ ಕಾರ್ಯ ಮಾಡಬೇಕು. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂಬ ಭಾವನೆಯನ್ನು ಸಮಾಜ ಬಾಂಧವರಲ್ಲಿ ಗಟ್ಟಿಯಾಗಿ ಮೂಡಿಸಬೇಕಿದೆ. ಈ ಪ್ರಯತ್ನವನ್ನು ಮಹಾಸಭಾ ನಿರಂತರವಾಗಿ ಮಾಡಿಕೊಂಡು ಬಂದಿದ್ದು, ಇದಕ್ಕೆ ನಾಡಿನ ಎಲ್ಲ ಮಠಾಧೀಶರೂ ಕೃಪೆ ಮಾಡಿ ಸಾಥ್ ನೀಡಬೇಕೆಂದು ಮನವಿ ಮಾಡಿಕೊಂಡರು.
ಮುಖ್ಯ ಅತಿಥಿ ಅ.ಭಾ.ವೀ ಮಹಾಸಭಾದ ಗದಗ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಸಮಾಜ ಮತ್ತು ಸಂಘಟನೆ ಕುರಿತು ಮಾತನಾಡಿದರು. ಪ್ರೊ. ಅನಿಲ ವೈದ್ಯ ಅವರಿಂದ ವಿಶೇಷ ಉಪನ್ಯಾಸ ಜರುಗಿತು.
ಸಾನ್ನಿಧ್ಯವನ್ನು ಹೂವಿನಶಿಗ್ಲಿ ವಿರಕ್ತಮಠದ ಪೂಜ್ಯ ಚನ್ನವೀರ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ ಕಲ್ಯಾಣಶೆಟ್ಟರ್ ವಹಿಸಿದ್ದರು. ಗಣ್ಯರಾದ ಗಂಗಾಧರ ಗಡ್ಡಿ, ಚನ್ನವೀರಪ್ಪ ಹುಣಶೀಕಟ್ಟಿ, ಮುರುಘರಾಜೇಂದ್ರ ಬಡ್ನಿ, ಉದಯರವಿ ಗುಡಿಮನಿ ಸೇರಿದಂತೆ ಗಣ್ಯರು, ಸಂಘಟನೆಯ ಪದಾಧಿಕಾರಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಮಹಾಸಭಾ ಯಾರನ್ನೂ ಟೀಕಿಸುವುದಿಲ್ಲ, ಯಾರ ವಿರುದ್ಧವೂ ಅಲ್ಲ. ವೀರಶೈವ ಲಿಂಗಾಯತರ ಅವರವರ ವೃತ್ತಿ, ಆಚರಣೆ ಏನೇ ಇದ್ದರೂ ಅದು ಅವರ ವೈಯುಕ್ತಿಕ. ಆದರೆ ಧರ್ಮ-ಸಮಾಜ ಎಂದು ಬಂದಾಗ ನಾವೆಲ್ಲರೂ ಒಂದು ಎಂಬ ಸದ್ಭಾವನೆ ಬರಬೇಕು. ಶತಶತಮಾನಗಳಿಂದ ಒಂದಾಗಿ ಬಂದಿರುವ ವೀರಶೈವ ಲಿಂಗಾಯತರನ್ನು ಒಗ್ಗೂಡಿಸಿಕೊಂಡು ಮುನ್ನಡೆಸುವ ಜವಾಬ್ದಾರಿಯುತ ಕಾರ್ಯಕ್ಕೆ ಮಹಾಸಭಾ ಮುಂದಾಗಿದ್ದು, ಮಹಾಸಭಾಕ್ಕೆ ಆಜೀವ ಸದಸ್ಯರಾಗುವ ಮೂಲಕ ಮಹಾಸಭಾಕ್ಕೆ ಮಹಾಬಲ ನೀಡಬೇಕೆಂದು ಶಂಕರ ಬಿದರಿ ಸಮಾಜಬಾಂಧವರಲ್ಲಿ ಅರಿಕೆ ಮಾಡಿಕೊಂಡರು.



