ನವದೆಹಲಿ: ಮೇಕೆದಾಟು ಯೋಜನೆ ಪ್ರಕರಣದಲ್ಲಿ ಕರ್ನಾಟಕಕ್ಕೆ ದೊಡ್ಡ ಗೆಲುವು ಲಭಿಸಿದೆ. ಯೋಜನೆ ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ಈ ತೀರ್ಪಿನಿಂದ ಮೇಕೆದಾಟು ಯೋಜನೆ ಮುಂದುವರಿಯಲು ಕರ್ನಾಟಕ ಸರ್ಕಾರಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ. ಕಳೆದ ಏಳು ವರ್ಷಗಳಿಂದ ತಮಿಳುನಾಡು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಾ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಇಂದು ಆ ಅರ್ಜಿ ವಜಾಗೊಂಡಿದೆ.
ವಿಚಾರಣೆ ವೇಳೆ , ಮೇಕೆದಾಟು ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದ್ದು ಯಾವುದೇ ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ. ಈ ಯೋಜನೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಹಾಗೂ ಕೇಂದ್ರ ಜಲ ಆಯೋಗ (CWC) ಸೇರಿದಂತೆ ತಜ್ಞ ಸಂಸ್ಥೆಗಳ ಪರಿಶೀಲನೆಯಲ್ಲಿದೆ.
ಹೀಗಾಗಿ, ಪ್ರಸ್ತುತ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ, ಮೇಕೆದಾಟು ಯೋಜನೆಗೆ ಕರ್ನಾಟಕ ಸರ್ಕಾರದ ಮುಂದಿನ ಕ್ರಮಗಳಿಗೆ ಕಾನೂನು ಅಡಚಣೆ ನಿವಾರಣೆಯಾಗಿದೆ.
ರಾಜಧಾನಿ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವುದು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದು ಮೇಕೆದಾಟು ಯೋಜನೆಯ ಪ್ರಮುಖ ಉದ್ದೇಶವಾಗಿದೆ.ಆದರೆ, ಈ ಯೋಜನೆಯಿಂದ ತಮಗೆ ಕಾವೇರಿ ನದಿಯಿಂದ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಎಂಬುದು ತಮಿಳುನಾಡಿನ ಪ್ರಮುಖ ಆತಂಕವಾಗಿದೆ
ಈ ಕಾರಣದಿಂದಾಗಿ, ಯೋಜನೆಯನ್ನು ವಿರೋಧಿಸಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು . ಕರ್ನಾಟಕವು ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗುವುದಿಲ್ಲ ಮತ್ತು ನಿಯಮಿತವಾಗಿ ನೀರು ಹರಿಸಲು ಸಹಾಯಕವಾಗಲಿದೆ ಎಂದು ವಾದಿಸುತ್ತಲೇ ಬಂದಿದೆ.


