ವಿಜಯಸಾಕ್ಷಿ ಸುದ್ದಿ, ಗದಗ: ಹೊಸ ಸರ್ಕಾರದಲ್ಲಿ ಗಾಣಿಗ ಸಮಾಜಕ್ಕೆ ಒಂದೇ ಒಂದು ಸಚಿವ ಸ್ಥಾನ ನೀಡದಿರುವುದು ದುರ್ದೈವದ ಸಂಗತಿ. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಗಾಣಿಗ ಸಮುದಾಯದ ಶಾಸಕರಿಗೆ ಅವಕಾಶ ನೀಡಬೇಕು. ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಗಾಣಿಗ ಸಮಾಜದ ಮುಖಂಡ ಬಸವರಾಜ ಬಿಂಗಿ ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷ್ಮಣ ಸವದಿ, ವೀರೇಂದ್ರ ಪಪ್ಪಿ ಹಾಗೂ ಬಿ.ಕೆ. ಸಂಗಮೇಶ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಸಮಾಜದ ಮುಖಂಡ ಡಾ. ಶೇಖರ್ ಸಜ್ಜನವರ ಮಾತನಾಡಿ, “ರಾಜ್ಯದಲ್ಲಿಯೇ ಅತಿಹೆಚ್ಚು ಮತಗಳ ಅಂತರದಿಂದ ಗೆದ್ದಿರುವ ಹಾಗೂ ಅನುಭವಿ ಹೋರಾಟಗಾರರಾಗಿರುವ ಲಕ್ಷ್ಮಣ ಸವದಿ ರಾಜ್ಯದ ಪ್ರಮುಖ ನಾಯಕರಾಗಿದ್ದಾರೆ. ಅವರನ್ನು ಸಚಿವರನ್ನಾಗಿ ಮಾಡುವುದು ಸಮಾಜದ ಬಹುದಿನಗಳ ಬೇಡಿಕೆ,” ಎಂದರು.
ಬಿಜೆಪಿಯಿಂದ ಕಾಂಗ್ರೆಸ್ಗೆ ಕರೆತರುವ ಸಂದರ್ಭದಲ್ಲಿ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಈಗ ಆ ಭರವಸೆ ಈಡೇರಿಸುವ ಸಮಯ ಬಂದಿದೆ ಎಂದು ಹೇಳಿದರು.
ನಿಂಗಪ್ಪ ಕೆಂಗಾರ ಮಾತನಾಡಿ, “ಹಿಂದಿನ ಸರ್ಕಾರದಲ್ಲಿ ಲಕ್ಷ್ಮಣ ಸವದಿ ಉತ್ತಮ ಆಡಳಿತ ನೀಡಿದ್ದಾರೆ. ರಾಜ್ಯದಲ್ಲಿ ಗಾಣಿಗ ಸಮಾಜವನ್ನು ಒಗ್ಗೂಡಿಸುವ ನಾಯಕತ್ವ ಅವರದು. ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಹೋರಾಟ ತೀವ್ರಗೊಳ್ಳಲಿದೆ,” ಎಂದು ಎಚ್ಚರಿಸಿದರು.
ಜಾತ್ಯತೀತ ಸರ್ಕಾರ ಹಿಂದುಳಿದ ಹಾಗೂ ತುಳಿತಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಉತ್ತರ ಕರ್ನಾಟಕದಲ್ಲಿ 30ರಿಂದ 40 ಶಾಸಕರನ್ನು ಗೆಲ್ಲಿಸುವ ಸಾಮರ್ಥ್ಯ ಗಾಣಿಗ ಸಮಾಜಕ್ಕಿದೆ. ಈ ಶಕ್ತಿಯನ್ನು ಸರ್ಕಾರ ಲಘುವಾಗಿ ತೆಗೆದುಕೊಳ್ಳಬಾರದು ಎಂದು ಮುಖಂಡರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಶೋಕ ಮಂದಾಲಿ, ಗಿರಿಯಪ್ಪ ಅಸೂಟಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
“ಗಾಣಿಗ ಸಮಾಜದ ಶಕ್ತಿಯನ್ನು ಕಡೆಗಣಿಸಿದರೆ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯಬೇಕಾಗುತ್ತದೆ.” — ಬಸವರಾಜ ಬಿಂಗಿ



