ಆಂಧ್ರಪ್ರದೇಶ: ಕರ್ನೂಲು ಜಿಲ್ಲೆಯ ಉಪನಗರ ಚಿನ್ನಟೇಕೂರು ಸಮೀಪದಲ್ಲಿ ಶುಕ್ರವಾರ ಬೆಳಿಗ್ಗಿನ ಜಾವ 3:30 ರ ಸುಮಾರಿಗೆ ಭಯಂಕರ ಬಸ್ ಅಪಘಾತ ಸಂಭವಿಸಿದೆ. ಪ್ರಯಾಣಿಕರು ನಿದ್ದೆಯಲ್ಲಿದ್ದಾಗಲೇ ಬಸ್ ಅಪಘಾತ ಸಂಭವಿಸಿ ಕ್ಷಣಮಾತ್ರದಲ್ಲೇ ಹೊತ್ತಿ ಉರಿದಿದೆ. ಇನ್ನೂ ಈ ಅಪಘಾತದಲ್ಲಿ 12 ಮಂದಿ ಕಿಟಕಿ ಗಾಜು ಒಡೆದು ಪಾರಾಗಿದ್ದಾರೆ. ಆದರೆ 20 ಮಂದಿ ಸಜೀವ ದಹನಗೊಂಡಿದ್ದಾರೆ.
ಈ ಅವಘಡದಲ್ಲಿ ನೆಲ್ಲೂರು ಜಿಲ್ಲೆಯ ಮಿಂಜಾಮುರ್ ಮಂಡಲದ ಗೊಲ್ಲವರಿಪಲ್ಲಿಯ ಒಂದೇ ಕುಟುಂಬದ ನಾಲ್ವರು ಸದಸ್ಯರು ಕೂಡಾ ಸಾವನ್ನಪ್ಪಿದ್ದಾರೆ. ಗೊಲ್ಲ ರಮೇಶ್, ಇವರ ಪತ್ನಿ ಮತ್ತು ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
ವಿಂಜಾಮೂರ್ ಮಂಡಲದ ಗೊಲ್ಲವರಿಪಳ್ಳಿಯ ಗೊಲ್ಲ ರಮೇಶ್ (35), ಅನುಷಾ (30), ಮಾನ್ವಿತಾ (10) ಮತ್ತು ಮನೀಶ್ (12) ಸಾವನ್ನಪ್ಪಿದವರು. ರಮೇಶ್ ಕಳೆದ 15 ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಕಂಪನಿಯ ಪ್ರವಾಸದ ಭಾಗವಾಗಿ ಕುಟುಂಬ ಸದಸ್ಯರೊಂದಿಗೆ ಹೈದರಾಬಾದ್‌ಗೆ ಬಂದಿದ್ದರು. ಹಿಂದಿರುಗುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.


