ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಕಠಿಣ ಕ್ರಮ ಮುಂದುವರಿಸಿದ್ದಾರೆ.
ಇದರ ನಡುವೆ ಸರ್ಕಾರ ಘೋಷಿಸಿರುವ ದಂಡ ರಿಯಾಯಿತಿ ಅವಧಿಯಲ್ಲಿ ಸಾರ್ವಜನಿಕರಿಂದ ದಂಡ ವಸೂಲಿ ಚುರುಕುಗೊಂಡಿದೆ.
ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಗೆ ಆಗಮಿಸಿದ ಬೈಕ್ ಸವಾರನೊಬ್ಬ, ತನ್ನ ದ್ವಿಚಕ್ರ ವಾಹನದ ಮೇಲೆ ದಾಖಲಾಗಿದ್ದ 100 ಸಂಚಾರ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದ ದಂಡವನ್ನು ಒಂದೇ ಬಾರಿಗೆ ಪಾವತಿಸಿದ್ದಾನೆ. ಶೇಕಡಾ 50ರ ರಿಯಾಯಿತಿಯ ಬಳಿಕ ಒಟ್ಟು 27,500 ರೂಪಾಯಿ ದಂಡ ಪಾವತಿಸಿರುವ ಸವಾರ, ಮುಂದಿನ ದಿನಗಳಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಭರವಸೆ ನೀಡಿದ್ದಾನೆ.
ಇದರ ಜೊತೆಗೆ ಬೆಂಗಳೂರು ಸಂಚಾರ ಪೊಲೀಸರು ನಗರಾದ್ಯಂತ ಡ್ರಂಕ್ ಅಂಡ್ ಡ್ರೈವ್ ಹಾಗೂ ಅತಿವೇಗ ಚಾಲನೆ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಜೂನ್ 15 ರಿಂದ ಜೂನ್ 26ರವರೆಗೆ 53 ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಪರಿಶೀಲನೆಯಲ್ಲಿ 43,057 ವಾಹನಗಳನ್ನು ತಪಾಸಣೆ ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ 669 ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅತಿವೇಗ ಚಾಲನೆ ಮಾಡಿದ 46 ವಾಹನ ಸವಾರರಿಂದ ಒಟ್ಟು 46 ಸಾವಿರ ರೂಪಾಯಿ ದಂಡ ವಸೂಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.



