ಚಾಮರಾಜನಗರ: ಜಿಲ್ಲೆಯ ನಾಗಮಲೆಯಲ್ಲಿ ಚಿರತೆ ದಾಳಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ ರಾಜ್ಯ ಸರ್ಕಾರ 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಅರಣ್ಯ ಇಲಾಖೆ ಈಗಾಗಲೇ 5 ಲಕ್ಷ ರೂಪಾಯಿ ಮೊತ್ತದ ಚೆಕ್‌ನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು, ಉಳಿದ ಮೊತ್ತವನ್ನು ಖಾತೆ ವಿವರ ಪಡೆದು ಶೀಘ್ರದಲ್ಲೇ ಜಮಾ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಮೇ 10ರಂದು ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿ ಬಾಲಕನನ್ನು ಎಳೆದೊಯ್ದು ಕೊಂದಿತ್ತು. ಈ ದುರ್ಘಟನೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಸಮೀಪ ಸಂಭವಿಸಿತ್ತು.
ಮೃತ ಬಾಲಕನನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯದ ವೃಷಭಾವತಿ ನಗರ ನಿವಾಸಿ ಹರ್ಷಿತ್ ಗೌಡ ಎಂದು ಗುರುತಿಸಲಾಗಿದೆ. ಆತ ತನ್ನ ಕುಟುಂಬದ 10 ಮಂದಿ ಸದಸ್ಯರೊಂದಿಗೆ ನಾಗಮಲೆಗೆ ಪಾದಯಾತ್ರೆ ಕೈಗೊಂಡಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ಪೋಷಕರ ಕಣ್ಣೆದುರೇ ಬಾಲಕನನ್ನು ಚಿರತೆ ಕಾಡಿನೊಳಗೆ ಎಳೆದೊಯ್ದಿದ್ದು, ಬಳಿಕ ಅರಣ್ಯಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.
ಈ ನಡುವೆ, ಬಾಲಕನ ಮೇಲೆ ದಾಳಿ ನಡೆಸಿದ ಚಿರತೆಯ ಚಲನವಲನ ಥರ್ಮಲ್ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ನಾಲ್ಕು ಬೋನುಗಳನ್ನು ಅಳವಡಿಸಿದೆ. ಸ್ಥಳದಲ್ಲಿ 30ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಬೀಡುಬಿಟ್ಟಿದ್ದು, ಡ್ರೋನ್ ತಂಡ ರಾತ್ರಿಯಿಡೀ ಚಿರತೆಯ ಮೇಲೆ ನಿಗಾ ವಹಿಸಿದೆ. ಸುರಕ್ಷತಾ ದೃಷ್ಟಿಯಿಂದ ನಾಗಮಲೆಗೆ ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಇದೇ ವೇಳೆ, ಘಟನೆಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಕಾಡಿನೊಳಗೆ ತೆರಳಲು ಹೆಚ್ಚುವರಿ ಹಣ ವಸೂಲಿ ಮಾಡಿದ್ದರೂ, ದಾಳಿ ನಡೆದ ಬಳಿಕ ಅರ್ಧ ಗಂಟೆಯಾದರೂ ಯಾವುದೇ ಅರಣ್ಯಾಧಿಕಾರಿ ಸ್ಥಳಕ್ಕೆ ಬಂದಿರಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಮ್ಮ ಮಗುವಿಗೆ ಆದಂತ ದುರ್ಘಟನೆ ಮತ್ತಾರಿಗೂ ಆಗಬಾರದು” ಎಂದು ಕುಟುಂಬಸ್ಥರು ನೋವು ವ್ಯಕ್ತಪಡಿಸಿದ್ದಾರೆ.



