ಬೆಂಗಳೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕುರಿತು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
SIR ಪ್ರಕ್ರಿಯೆಯಲ್ಲಿ 1.08 ಕೋಟಿಗೂ ಅಧಿಕ ಮತದಾರರನ್ನು ASDDO ಪಟ್ಟಿಯಲ್ಲಿ ಗುರುತಿಸಿರುವುದು ಹಾಗೂ ಸುಮಾರು 43 ಲಕ್ಷ ಮತದಾರರಿಗೆ ತಾರ್ಕಿಕ ವ್ಯತ್ಯಾಸಗಳ ಕುರಿತು ನೋಟಿಸ್ ನೀಡಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ನೀಡಿರುವ ಅವಧಿಯನ್ನು ವಿಸ್ತರಿಸುವಂತೆ ಅವರು ಮನವಿ ಮಾಡಿದ್ದಾರೆ.
ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಸಭೆ ಹಾಗೂ ನಗರ ಪ್ರದೇಶಗಳಲ್ಲಿ ವಾರ್ಡ್ ಸಮಿತಿ ಸಭೆಗಳನ್ನು ನಡೆಸುವಂತೆ ಮುಖ್ಯ ಚುನಾವಣಾಧಿಕಾರಿಗೆ ನಿರ್ದೇಶನ ನೀಡಬೇಕು. ಈ ಸಭೆಗಳ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ತಾರ್ಕಿಕ ವ್ಯತ್ಯಾಸಗಳು ಅಥವಾ 2002ರ ಮತದಾರರ ಪಟ್ಟಿಯೊಂದಿಗೆ ಲಿಂಕ್ ಇಲ್ಲದಿರುವ ಕಾರಣ ನೋಟಿಸ್ ಪಡೆದಿರುವ ಮತದಾರರಿಗೆ ಪ್ರತಿಕ್ರಿಯಿಸಲು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಕನಿಷ್ಠ 3ರಿಂದ 4 ವಾರಗಳ ಕಾಲಾವಕಾಶ ನೀಡಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾಗುವ ಹಕ್ಕು, ಆಕ್ಷೇಪಣೆ ಹಾಗೂ ಅರ್ಜಿಗಳನ್ನು ನಿರ್ವಹಿಸಲು ಚುನಾವಣಾ ನೋಂದಣಿ ಅಧಿಕಾರಿಗಳ (ERO) ಸಂಖ್ಯೆಯನ್ನು ಹೆಚ್ಚಿಸಬೇಕು. ಅಗತ್ಯವಿದ್ದರೆ ಜಿಲ್ಲಾ ಚುನಾವಣಾಧಿಕಾರಿಗಳ (DEO) ಸಂಖ್ಯೆಯನ್ನೂ ಹೆಚ್ಚಿಸಿ, ತಪ್ಪುಗಳು ಹಾಗೂ ಅನ್ಯಾಯಯುತ ಮತದಾರರ ಹೊರಗಿಡುವಿಕೆಯನ್ನು ತಡೆಯಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
SIR ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ಕರ್ನಾಟಕ ಸರ್ಕಾರವು ಚುನಾವಣಾ ಆಯೋಗಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗ್ರಾಮಸಭೆ ಹಾಗೂ ವಾರ್ಡ್ ಸಮಿತಿ ಸಭೆಗಳನ್ನು ಆಯೋಜಿಸಲು ಸ್ಥಳೀಯ ಆಡಳಿತದ ನೆರವು, ವ್ಯಾಪಕ ಜನಜಾಗೃತಿ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳು ಹಾಗೂ ಅಗತ್ಯ ಸಮನ್ವಯ ಮತ್ತು ಲಾಜಿಸ್ಟಿಕ್ ನೆರವನ್ನು ಸರ್ಕಾರ ಒದಗಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.



