ಪಾಟ್ನಾ: ವಿದ್ಯಾರ್ಥಿಯೊಬ್ಬನ ಶಾಲಾ ಬ್ಯಾಗ್ನಲ್ಲಿ ಗಾಂಜಾವನ್ನು ಅಡಗಿಸಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಮೂವರು ಅಪ್ರಾಪ್ತರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಬಿಹಾರದ ಹಾಜಿಪುರದಲ್ಲಿ ನಡೆದಿದೆ.
ಖಚಿತ ಮಾಹಿತಿ ಆಧರಿಸಿ ಪೊಲೀಸರು ಮುಜಫರ್ಪುರದಿಂದ ಪಾಟ್ನಾಕ್ಕೆ ತೆರಳುತ್ತಿದ್ದ ಬಸ್ಸನ್ನು ಭಗವಾನ್ಪುರ ಅಡ್ಡಾ ಚೌಕ್ನಲ್ಲಿ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅನುಮಾನಾಸ್ಪದ ಪ್ರಯಾಣಿಕರನ್ನು ತಪಾಸಣೆ ಮಾಡಿದಾಗ, ಅಪ್ರಾಪ್ತರ ಶಾಲಾ ಬ್ಯಾಗ್ಗಳಲ್ಲಿ ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ಗಾಂಜಾ ಪತ್ತೆಯಾಗಿದೆ.
ಭಗವಾನ್ಪುರ ಪೊಲೀಸರು ಹಾಗೂ ಮದ್ಯಪಾನ ನಿಷೇಧ ಇಲಾಖೆಯ ಜಂಟಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 38 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 4 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.
‘ಆಪರೇಷನ್ ನೀಲಕಂಠ’ದ ಅಡಿಯಲ್ಲಿ ಐವರನ್ನೂ ವಶಕ್ಕೆ ಪಡೆಯಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಆರಂಭಿಸಲಾಗಿದೆ. ಬಂಧಿತರು ಮಾದಕ ವಸ್ತುಗಳನ್ನು ಪೂರೈಸುವ ಉದ್ದೇಶದಿಂದ ಪಾಟ್ನಾಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಬಂಧಿತರಲ್ಲಿ ಮೂವರು ಅಪ್ರಾಪ್ತರಾಗಿರುವುದು ಆತಂಕಕ್ಕೆ ಕಾರಣವಾಗಿದೆ.



