ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜಗತ್ತಿನಲ್ಲಿ ಎಲ್ಲರೂ ಧರ್ಮದಿಂದ ಬದುಕಬೇಕೆಂದು ಹೇಳುತ್ತಾರೆ. ಆದರೆ ಧರ್ಮವೆಂದರೆ ಏನೆಂಬುದನ್ನು ಅರ್ಥೈಸಲು ಇಂದಿಗೂ ಯಾರಿಂದಲೂ ಸಾಧ್ಯವಾಗಿಲ್ಲ. ಧರ್ಮವು ಮೋಕ್ಷ ಸಾಧನೆಗೆ ಒಂದು ಮಾರ್ಗವಾಗಿದೆ ಎಂದು ಗದಗ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್. ಸೋಮಣ್ಣವರ ಹೇಳಿದರು.
ಪಟ್ಟಣದ ಕೋಡಿಕೊಪ್ಪದಲ್ಲಿನ ಶ್ರೀ ಅನ್ನದಾನೇಶ್ವರ ಮಂಟಪದಲ್ಲಿ ಎಸ್ಎವಿವಿಪಿ ಸಮಿತಿ ನರೇಗಲ್ಲ ಮತ್ತು ಅಕ್ಷರ ಭಾರತ ಪ್ರತಿಷ್ಠಾನ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶಿವಾನುಭವಗೋಷ್ಠಿ-57ರಲ್ಲಿ ಅವರು ಜಾಗತಿಕ ಧಾರ್ಮಿಕ ವೈವಿಧ್ಯತೆಗಳು ಮತ್ತು ಶಾಂತಿ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಜಗತ್ತಿನಲ್ಲಿ 10 ಸಾವಿರಕ್ಕೂ ಮಿಕ್ಕಿ ಧರ್ಮಗಳಿವೆ. ಅದರಲ್ಲಿ ಕೆಲವು ಚಾಲ್ತಿಯಲ್ಲಿದ್ದರೆ ಮತ್ತೆ ಕೆಲವು ನಶಿಸಿ ಹೋಗಿವೆ. ಜಗತ್ತಿನ ಪ್ರತಿ ಮನುಷ್ಯನೂ ಒಂದಿಲ್ಲ ಒಂದು ಧರ್ಮಕ್ಕೆ ಅಂಟಿಕೊAಡಿದ್ದಾನೆ. ಜಗತ್ತಿನ ಬಹುತೇಕ ಧರ್ಮಗಳು ಹುಟ್ಟಿಕೊಂಡಿದ್ದು ಏಶಿಯಾ ಖಂಡದಲ್ಲಿ. ಎಲ್ಲ ಧರ್ಮಗಳೂ ಶಾಂತಿ, ಸಹನೆಯ ಜೀವನವನ್ನೆ ಬಯಸುತ್ತವೆ ಮತ್ತು ಬೋಧಿಸುತ್ತವೆ. ಆದರೆ ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಮನುಷ್ಯ ಸಲ್ಲದ ರಗಳೆಗಳನ್ನು ಮಾಡಿಕೊಂಡು ಗೋಳಾಡುತ್ತಿದ್ದಾನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಧರ್ಮದ ಮತ್ತಷ್ಟು ಆಯಾಮಗಳನ್ನು ಸಭೆಗೆ ಪರಿಚಯಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ ವೇದಿಕೆಯ ಮೇಲಿದ್ದರು. ಶಿವಾನುಭವಗೋಷ್ಠಿಯಲ್ಲಿ ಉಪನ್ಯಾಸಕ ಹಾದಿಮನಿ, ನಿವೃತ್ತ ಶಿಕ್ಷಕ ಎಂ.ಎ. ಹಿರೆವಡೆಯರ, ಹಾಸ್ಟೆಲ್ ಚೇರಮನ್ ಮೈಲಾರಪ್ಪ ಮೆಣಸಿಗಿ ಸೇರಿದಂತೆ ಇನ್ನೂ ಅನೇಕರಿದ್ದರು.
ಪ್ರಾಚಾರ್ಯ ವೈ.ಸಿ. ಪಾಟೀಲ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಮುತ್ತಣ್ಣ ಹೊನವಾಡ ನಿರೂಪಿಸಿದರು. ಡಾ. ಕಲ್ಲಯ್ಯ ಹಿರೇಮಠ ವಂದಿಸಿದರು.
ಜಗತ್ತಿನ ಎಲ್ಲ ಚರಾಚರ ವಸ್ತುಗಳಲ್ಲಿಯೂ ದೇವರನ್ನು ಕಾಣುವುದು ಭಾರತೀಯ ಸಂಸ್ಕೃತಿ. ಭಾರತೀಯರು ಬಹು ದೇವತಾರಾಧನೆಯನ್ನು ಅಳವಡಿಸಿಕೊಂಡಿದ್ದಾರೆ. ಇದೇ ತತ್ವವನ್ನು ಜಗತ್ತಿನ ಬಹುತೇಕ ದೇಶಗಳು ಅಳವಡಿಸಿಕೊಂಡಿವೆ. ನಂತರದಲ್ಲಿ ಏಕ ದೇವತೋಪಾಸನೆ ಜಾರಿಯಲ್ಲಿ ಬಂತು. ಜಾತಿ, ಮತ, ಪಂಥಗಳನ್ನು ಮೀರಿ ಇರುವುದೇ ಧರ್ಮ. ಧರ್ಮದ ಅರ್ಥ ಬಹಳಷ್ಟು ವಿಸ್ತಾರವಾಗಿದ್ದು, ಅದನ್ನು ಅರಿಯುವುದು ಕಷ್ಟದ ಕೆಲಸ ಎಂದು ಎಸ್.ಎಸ್. ಸೋಮಣ್ಣವರ ಅಭಿಪ್ರಾಯಪಟ್ಟರು.



