ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಗರದ ಹಿರೇಹಂದಿಗೋಳ ರಸ್ತೆಯ ಗಂಗಿಮಡಿ ಪ್ರದೇಶದಲ್ಲಿ ರೈತರ ಹೊಲಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ನಿರೀಕ್ಷೆಯಿಂದ ಬಿತ್ತನೆ ಮಾಡಿದ್ದರು. ಆದರೆ ಜುಲೈ ತಿಂಗಳಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟ ಪರಿಣಾಮ ಬೆಳೆಗಳು ಒಣಗುತ್ತಿದ್ದು, ಹಲವೆಡೆ ಬಿತ್ತನೆಯೇ ಆಗಿಲ್ಲ. ಬಿತ್ತನೆ ಮಾಡಿದ ಬೆಳೆಗಳೂ ಹಾನಿಗೊಳಗಾಗಿದ್ದು, ವಿಶೇಷವಾಗಿ ಹೆಸರು ಬೆಳೆ ಸಂಪೂರ್ಣ ನಷ್ಟವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ಬರದ ತೀವ್ರತೆ ಬೇರೆಬೇರೆಯಾಗಿದ್ದರೂ ಸರ್ಕಾರ ಇದುವರೆಗೆ ವೈಜ್ಞಾನಿಕ ಬೆಳೆ ಸಮೀಕ್ಷೆ ನಡೆಸಿಲ್ಲ. ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಸಾಂಖ್ಯಿಕ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದಾಗ ಮಾತ್ರ ಅದು ಅಧಿಕೃತವಾಗುತ್ತದೆ. ಎನ್ಡಿಆರ್ಎಫ್ ನಿಯಮಾವಳಿಗಳ ಪ್ರಕಾರ ಅಗತ್ಯ ಎಸ್ಒಪಿ ಸಿದ್ಧಪಡಿಸದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಬರ ನಿರ್ವಹಣೆಗೆ ಯಾವುದೇ ತುರ್ತು ಯೋಜನೆ ರೂಪಿಸಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪರ್ಯಾಯ ವ್ಯವಸ್ಥೆಯೂ ಇಲ್ಲ. ಪಶ್ಚಿಮ ಘಟ್ಟದಲ್ಲಿ ಮಳೆಯಾಗಿ ನದಿಗಳಲ್ಲಿ ನೀರು ಹರಿಯುತ್ತಿದ್ದರೂ, ಅದನ್ನು ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಿಲ್ಲ. ರಾಜ್ಯದ ಸುಮಾರು 145 ಏತ ನೀರಾವರಿ ಯೋಜನೆಗಳು ದುರಸ್ತಿ ಹಾಗೂ ವಿದ್ಯುತ್ ಬಿಲ್ ಪಾವತಿಸದ ಕಾರಣ ಸ್ಥಗಿತಗೊಂಡಿವೆ ಎಂದು ದೂರಿದರು.
ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ₹15 ರಿಂದ ₹20 ಕೋಟಿ ಹಣ ಲಭ್ಯವಿದ್ದು, ಅದನ್ನು ಬರ ಪರಿಹಾರ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಬಳಸಬೇಕು. ಹಣದ ಕೊರತೆಯ ನೆಪ ಹೇಳುವುದನ್ನು ಸರ್ಕಾರ ಬಿಡಬೇಕು ಎಂದ ಅವರು, ಕೇಂದ್ರ ಸರ್ಕಾರದ ರೈತರ ಮೊಬೈಲ್ ಆ್ಯಪ್ ಕುರಿತು ಜಾಗೃತಿ ಮೂಡಿಸಿ, ಬೆಳೆ ಮಾಹಿತಿ ಸಂಗ್ರಹಿಸುವ ಕೆಲಸವನ್ನೂ ತ್ವರಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಎನ್ಡಿಆರ್ಎಫ್ ಮಾನದಂಡಕ್ಕಿಂತ ಎರಡು ಪಟ್ಟು ಹೆಚ್ಚಿನ ಪರಿಹಾರ ನೀಡಲಾಗಿತ್ತು. ಒಣ ಬೇಸಾಯಕ್ಕೆ ₹13,600, ನೀರಾವರಿ ಬೆಳೆಗೆ ₹25,000 ಹಾಗೂ ತೋಟಗಾರಿಕೆ ಬೆಳೆಗಳಿಗೆ ₹28,000ವರೆಗೆ ಪರಿಹಾರ ನೀಡಿದ್ದೇವೆ. ಆದರೆ ಈಗಿನ ಸರ್ಕಾರ ರೈತರ ಸಂಕಷ್ಟ ಮರೆತು ರಾಜಕೀಯದಲ್ಲೇ ನಿರತವಾಗಿದೆ ಎಂದು ಟೀಕಿಸಿದರು.
ಇನ್ನೊಂದು ವಾರದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಗದಗ ಜಿಲ್ಲೆಯಾದ್ಯಂತ ಸ್ವತಂತ್ರವಾಗಿ ಬೆಳೆ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ರೈತರ ಪರವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
“ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರ ಸಮಸ್ಯೆಗೆ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಬಿಜೆಪಿ ರೈತ ಮೋರ್ಚಾ ಉಗ್ರ ಹೋರಾಟ ನಡೆಸಲಿದೆ.”
– ಬಸವರಾಜ ಬೊಮ್ಮಾಯಿ



