ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಕರಾವಳಿಯ ಜಿಲ್ಲೆಗಳಲ್ಲಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೀದರ್, ಕಲಬುರ್ಗಿ, ಯಾದಗಿರಿ, ಕೊಪ್ಪಳ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಲಘು ಮಳೆಯ ಸಾಧ್ಯತೆ ಇದೆ. ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಗುಡುಗು ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.



