ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಕಡೆಯವರ ಸಭೆಗಳ ಮೇಲೆ ನಿಗಾ ಇಡಲು ಸಿಎಂ ಸಿದ್ದರಾಮಯ್ಯ ಒಬ್ಬ ಎಸ್‌ಪಿ ನೇಮಕ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಡಿಕೆಶಿ ಬಣದ ಶಾಸಕರ ಮೇಲೆ ಗುಪ್ತಚರ ನಿಗಾ ವಿಚಾರವಾಗಿ ಪ್ರತಿಕ್ರಿಯಿಸಿ, “ಇದು ಆದೇಶ ಇಲ್ಲದ ಎಸ್‌ಐಟಿ ಮಾಡಿರುವ ಹಾಗೆಯೇ ಇದೆ. ಇದೊಂದು ರೀತಿ ಕಣ್ಣಿಗೆ ಕಾಣದ ಎಸ್‌ಐಟಿ. ಡಿಕೆಶಿ ಕಡೆಯವರು ಎಲ್ಲಿ ಹೋಗುತ್ತಾರೆ, ಏನೇನು ಮಾಡುತ್ತಾರೆ ಎಂದು ಪತ್ತೆ ಮಾಡುವುದೇ ಈ ಕಣ್ಣಿಗೆ ಕಾಣದ ಎಸ್‌ಐಟಿ ಕೆಲಸ” ಎಂದು ಹೇಳಿದರು.
ಕಾಂಗ್ರೆಸ್ ಒಡೆದ ಮನೆಯಾಗಿದೆ. ಕಾಂಗ್ರೆಸ್‌ನವರು ಕಾಂಗ್ರೆಸ್‌ನವರಿಗೇ ಬೀದಿಗಿಳಿದು ಧಮ್ಕಿ ಹಾಕುತ್ತಿದ್ದಾರೆ. ಸಿಎಂ ಮತ್ತು ಡಿಸಿಎಂ ಬೆಂಬಲಿಗರು ಬೀದಿಗಿಳಿದು ಕಚ್ಚಾಡುತ್ತಿದ್ದಾರೆ. ಆಡಳಿತ ಕುಸಿದಿದೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ,” ಎಂದು ಟೀಕಿಸಿದರು.
ಬಜೆಟ್ ಅಧಿವೇಶನದಲ್ಲಿ ಆಡಳಿತ ವೈಫಲ್ಯಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ ಅವರು, “ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಅಭಿವೃದ್ಧಿ ಶೂನ್ಯವಾಗಿದೆ. ಕಸದ ಸಮಸ್ಯೆ, ಇ-ಖಾತಾ, ನೋಂದಣಿ ಸ್ಥಗಿತ, ಆದಾಯ ಕುಸಿತ ಸೇರಿದಂತೆ ಎಲ್ಲ ವಿಚಾರಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ” ಎಂದರು.
ಸಚಿವ ಎಂ.ಬಿ. ಪಾಟೀಲ್ ಶ್ರೀಮಂತರು ಗ್ಯಾರಂಟಿ ಯೋಜನೆ ಬಿಡಬೇಕೆಂಬ ಹೇಳಿಕೆಗೆ ಪ್ರತಿಕ್ರಿಯಿಸಿ, “ಎಲ್ಲರಿಗೂ ಗ್ಯಾರಂಟಿ ಕೊಡುತ್ತೇವೆ ಎಂದಿದ್ದರು. ಈಗ ಶ್ರೀಮಂತರು ಬಿಟ್ಟುಕೊಡಬೇಕು ಎನ್ನುತ್ತಿದ್ದಾರೆ. ಅಂದರೆ ಜನತೆಗೆ ಕೊಟ್ಟ ಮಾತು ತಪ್ಪುತ್ತಿದ್ದಾರೆ. ಸರ್ಕಾರದ ಖಜಾನೆ ಖಾಲಿಯಾಗಿದೆ. ಅದಕ್ಕೇ ಶ್ರೀಮಂತರಿಗೆ ತೆಗೆದುಕೊಳ್ಳಬೇಡಿ ಎನ್ನುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.



