ನೆಲಮಂಗಲ: ತಾಲೂಕಿನ ಗಡಿ ಗ್ರಾಮ ಹಳೇ ನಿಜಗಲ್‌ನಲ್ಲಿರುವ ಅಡಿಕೆ ತೋಟದ ಪಕ್ಕದಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು ತುಮಕೂರು ಮೂಲದ ಯಮುನಾ (35) ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಅವರು ಈಗ ಅಸ್ಥಿಪಂಜರ ರೂಪದಲ್ಲಿ ಪತ್ತೆಯಾಗಿದ್ದಾರೆ. ತಲೆಬುರುಡೆ ಹಾಗೂ ಕೈ-ಕಾಲುಗಳ ಕೆಲವು ಮೂಳೆಗಳು ಸ್ಥಳದಲ್ಲಿ ಸಿಕ್ಕಿದ್ದು, ಜೊತೆಗೆ ಮಹಿಳೆಯ ಬ್ಯಾಗ್ ಹಾಗೂ ಐಡಿ ಕಾರ್ಡ್ ಕೂಡ ದೊರೆತಿರುವುದರಿಂದ ಗುರುತು ಪತ್ತೆ ಸಾಧ್ಯವಾಗಿದೆ.
ಯಮುನಾ 19 ವರ್ಷಗಳ ಹಿಂದೆ ಮಲ್ಲಿಕಾರ್ಜುನ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಬಳಿಕ ಎಂಟು ವರ್ಷಗಳ ಹಿಂದೆ ರಾಘವೇಂದ್ರ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಅವರು, ಪತಿಯನ್ನು ಬಿಟ್ಟು ಕೆಲ ವರ್ಷ ದೊಡ್ಡಬಳ್ಳಾಪುರದಲ್ಲಿ ಆತನೊಂದಿಗೆ ವಾಸವಿದ್ದರು. ನಂತರ ಎರಡು ವರ್ಷಗಳ ಹಿಂದೆ ಮತ್ತೆ ಪತಿಯ ಮನೆಗೆ ಮರಳಿ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಮಾರ್ಚ್ 21ರಂದು ಯಮುನಾ ಅವರ ಹುಟ್ಟುಹಬ್ಬ ಇದ್ದು, ಆ ದಿನ ರಾಘವೇಂದ್ರ ಭೇಟಿ ಮಾಡುವಂತೆ ಒತ್ತಾಯಿಸಿದ್ದನೆಂದು ಮಾಹಿತಿ ಲಭ್ಯವಾಗಿದೆ. ಕೆಲಸ ಮುಗಿಸಿ ಆತನನ್ನು ಭೇಟಿಯಾಗಲು ತೆರಳಿದ ನಂತರ ಯಮುನಾ ನಾಪತ್ತೆಯಾಗಿದ್ದರು. ಈ ಕುರಿತು ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಅಡಿಕೆ ತೋಟದ ಬಳಿ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಡಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಘವೇಂದ್ರನೇ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಶವವನ್ನು ಅಡಿಕೆ ತೋಟದ ಬಳಿ ಎಸೆದಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



