ಬೆಂಗಳೂರು: ನಗರದಲ್ಲಿ ಮತ್ತೊಂದು ದೊಡ್ಡ ಅಗ್ನಿ ಅವಘಡ ಸಂಭವಿಸಿದೆ.
ನೈಸ್ ರಸ್ತೆಯ ಸೋಂಪುರ ಸರ್ಕಲ್‌ನಲ್ಲಿರುವ ಶುದ್ಧ ತಿಂಡಿ ಹೋಟೆಲ್‌ಗೆ ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲೇ ಧಗಧಗನೆ ಹೊತ್ತಿ ಉರಿದ ಪರಿಣಾಮ ಸಂಪೂರ್ಣ ಹೋಟೆಲ್ ಸುಟ್ಟು ಕರಕಲಾಗಿದೆ.
ಇತ್ತೀಚಿಗಷ್ಟೇ, ಮಾರ್ಚ್ ತಿಂಗಳಲ್ಲಿ ಉದ್ಘಾಟನೆಯಾಗಿದ್ದ ಈ ಬೃಹತ್ ಹೋಟೆಲ್‌ನಲ್ಲಿ ಇಡ್ಲಿ ಸ್ಟೀಮರ್‌ನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವುದಾಗಿ ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಬೆಂಕಿ ತಗುಲುತ್ತಿದ್ದಂತೆಯೇ ಒಳಗಿದ್ದ ಸಿಬ್ಬಂದಿಗಳು ತಕ್ಷಣ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿ, ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಘಟನೆಯಿಂದಾಗಿ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.



