ಪಾಟ್ನಾ: ಬಿಹಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅವರು ಬಿಹಾರದಲ್ಲಿ ಬಿಜೆಪಿಯಿಂದ ಆಯ್ಕೆಯಾದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪಾಟ್ನಾದ ಲೋಕ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಅವರು ಸಾಮ್ರಾಟ್ ಚೌಧರಿಗೆ ಪದವಿ ಪ್ರಮಾಣವಚನ ಬೋಧಿಸಿದರು. ಇದೇ ವೇಳೆ, ಉಪಮುಖ್ಯಮಂತ್ರಿಗಳಾಗಿ ಜೆಡಿಯು ನಾಯಕರುಗಳಾದ ವಿಜಯ್ ಚೌಧರಿ ಮತ್ತು ಬಿಜೇಂದ್ರ ಯಾದವ್ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನದ ನಂತರ ಮಾತನಾಡಿದ ಉಪಮುಖ್ಯಮಂತ್ರಿ ವಿಜಯ್ ಚೌಧರಿ, ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದ ಅನುಭವದಿಂದ ಸಾಕಷ್ಟು ಕಲಿತಿದ್ದೇವೆ ಎಂದು ಹೇಳಿದರು. ಅವರ ಆಡಳಿತ ಶೈಲಿಯನ್ನು ಮುಂದುವರಿಸುವುದಾಗಿ ತಿಳಿಸಿದರು.
ಇನ್ನೋರ್ವ ಉಪಮುಖ್ಯಮಂತ್ರಿ ಬಿಜೇಂದ್ರ ಯಾದವ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿ, ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನಿತೀಶ್ ಕುಮಾರ್ ಅವರ ಆಡಳಿತ ಪರಂಪರೆಯನ್ನು ಮುಂದುವರಿಸಲಿದ್ದಾರೆ ಎಂದರು. ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲದೆ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದರು.
ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.



