ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವುದು ಮೋಟಾರು ವಾಹನ ಕಾಯ್ದೆಯ ಪ್ರಮುಖ ಉದ್ದೇಶ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆ, ಅಪಘಾತದಲ್ಲಿ ಮೃತಪಟ್ಟ ಕ್ಷೌರಿಕನ ಕುಟುಂಬಕ್ಕೆ ₹44.47 ಲಕ್ಷ ಪರಿಹಾರವನ್ನು ನೀಡಲು ವಿಮಾ ಕಂಪನಿಗೆ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಎಸ್. ರಾಚಯ್ಯ ಅವರಿದ್ದ ಪೀಠವು, ಮೃತರ ಕುಟುಂಬ ಹಾಗೂ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.
ದಾಖಲೆಗಳ ಪರಿಶೀಲನೆಯ ಬಳಿಕ, ಮೃತ ವ್ಯಕ್ತಿ ಕ್ಷೌರಿಕ ವೃತ್ತಿಯಲ್ಲಿ ತೊಡಗಿದ್ದು ತಿಂಗಳಿಗೆ ₹14,000 ಆದಾಯ ಹೊಂದಿದ್ದನೆಂದು ಪರಿಗಣಿಸಿ, ನ್ಯಾಯಮಂಡಳಿ ನೀಡಿದ್ದ ₹32.56 ಲಕ್ಷ ಪರಿಹಾರವನ್ನು ₹44.47 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ ₹11.91 ಲಕ್ಷಕ್ಕೆ ಶೇ.6 ಬಡ್ಡಿಯೊಂದಿಗೆ ಆರು ವಾರಗಳಲ್ಲಿ ಪಾವತಿಸುವಂತೆ ಸೂಚಿಸಲಾಗಿದೆ.
ಇದಲ್ಲದೆ, ಅಪಘಾತದ ವೇಳೆ ಮೃತರೇ ವಾಹನ ಚಾಲನೆ ಮಾಡುತ್ತಿದ್ದರು ಎಂಬ ವಿಮಾ ಕಂಪನಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ವಾಹನವನ್ನು ಚಲಾಯಿಸುತ್ತಿದ್ದವರು ಬೇರೆ ವ್ಯಕ್ತಿಯಾಗಿದ್ದು, ಮೃತರು ಹಿಂಬದಿ ಸವಾರರಾಗಿದ್ದರು ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಪರಿಹಾರ ಪಾವತಿಸುವ ಹೊಣೆಗಾರಿಕೆ ವಿಮಾ ಕಂಪನಿಯ ಮೇಲೇ ಇದೆ ಎಂದು ತಿಳಿಸಿ, ಕಂಪನಿಯ ಅರ್ಜಿಯನ್ನು ವಜಾಗೊಳಿಸಿದೆ.
ಘಟನೆಯ ಹಿನ್ನಲೆ:
2018ರ ಸೆಪ್ಟೆಂಬರ್ 4ರಂದು ಮಂಜುನಾಥ್ ಅವರು ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದ ವೇಳೆ ನೆಲಮಂಗಲ ಸಮೀಪ ವಾಹನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರು. ತಲೆಗೆ ಗಂಭೀರ ಗಾಯಗೊಂಡ ಅವರು 2019ರ ಫೆಬ್ರವರಿ 23ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಬಳಿಕ ಕುಟುಂಬಸ್ಥರು ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು.



