ಬೆಂಗಳೂರು: ಬಿಟ್‌ಕಾಯಿನ್ ಪ್ರಕರಣದ ಎಸ್‌ಐಟಿ ತನಿಖೆಯಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮಧ್ಯಂತರ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರಕರಣದ ತನಿಖೆಯನ್ನು ಶೀಘ್ರಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದೇ ಸೂಚನೆ ನೀಡಿದ್ದಾರೆ. ಮಧ್ಯಂತರ ವರದಿ ನೀಡುವಂತೆ ಎಸ್‌ಐಟಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ, ಎಸ್‌ಐಟಿ ಮೂಲಕ ಇಡಿ ಕೆಲವು ಮಾಹಿತಿಗಳನ್ನು ಪಡೆದಿರಬಹುದು. ಬಿಟ್‌ಕಾಯಿನ್ ಪ್ರಕರಣದ ಕುರಿತು ಸ್ಪಷ್ಟ ಮಾಹಿತಿ ನೀಡುವುದು ಇಡಿಯವರ ಜವಾಬ್ದಾರಿ. ಶ್ರೀಕಿ ಜೊತೆ ಪ್ರಭಾವಿ ವ್ಯಕ್ತಿಗಳ ಮಕ್ಕಳ ಸಂಪರ್ಕವಿದೆ ಎಂಬ ವಿಚಾರವನ್ನು ಇಡಿಯವರೇ ದೃಢಪಡಿಸಬೇಕು. ರಾಜಕೀಯವಾಗಿ ಹೇಳಿಕೆ ನೀಡಬಹುದಾದರೂ, ಸತ್ಯಾಸತ್ಯತೆ ಪರಿಶೀಲನೆ ಮುಖ್ಯ ಎಂದು ಹೇಳಿದರು.
ನಲಪಾಡ್ ಮೇಲಿನ ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಾಸಕ ಹ್ಯಾರಿಸ್ ಅವರ ಇಬ್ಬರು ಪುತ್ರರ ಮನೆಗಳ ಮೇಲೆ ಇಡಿ ದಾಳಿ ನಡೆಸಲಾಗಿದೆ. ದಾಳಿಯ ಒಳಹೊರಗಿನ ವಿವರಗಳು ನಮಗೆ ತಿಳಿದಿಲ್ಲ. ಈ ಬಗ್ಗೆ ಇಡಿಯವರು ಅಧಿಕೃತ ಪ್ರೆಸ್‌ನೋಟ್ ಹೊರಡಿಸಬೇಕು ಎಂದು ಹೇಳಿದರು.
ಈ ಹಿಂದೆ ಸರ್ಕಾರವೇ ಎಸ್‌ಐಟಿ ರಚನೆ ಮಾಡಿದ್ದು, ಇದುವರೆಗೂ ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ ಎಂಬುದನ್ನೂ ಗಮನಕ್ಕೆ ತಂದರು.
ದಲಿತ ಅಧಿಕಾರಿಗಳಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ವರದಿ ಕೇಳಲಾಗಿದೆ. ಡಿಜಿಪಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇನ್ಸ್‌ಪೆಕ್ಟರ್ ಶ್ರೀನಿವಾಸ್ ಪತ್ರ ಬರೆದಿರುವುದಾಗಿ ತಿಳಿದುಬಂದಿದ್ದು, ಎಸ್‌ಪಿ ಕಾಶೀನಾಥ್ ಅವರಿಂದಲೂ ಪ್ರಕರಣದ ವರದಿ ಕೇಳಲಾಗಿದೆ. ಎರಡು ಪ್ರಕರಣಗಳ ವರದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.



