ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹೈದರಾಬಾದ್ ಮೂಲದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಕುಟುಂಬದ ಮುಖ್ಯಸ್ಥ ಹಾಗೂ ಮತ್ತೊಬ್ಬ ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಹೈದರಾಬಾದ್ನ ಸೈದಾಬಾದ್ ನಿವಾಸಿ ಶೇಖ್ ನವೀದ್ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮತ್ತೊಂದು ವಾಹನದೊಂದಿಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಅಪಘಾತದ ತೀವ್ರತೆಗೆ ನವೀದ್ ಅವರ ಪತ್ನಿ ನಾಜಿಯಾ ಸಲ್ಮಾ, ಪುತ್ರ ಹಾಗೂ ಪುತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಶೇಖ್ ನವೀದ್ ಮತ್ತು ಅವರ ಕಿರಿಯ ಪುತ್ರಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದು, ಚಿಕಿತ್ಸೆ ಮುಂದುವರಿದಿದೆ.
ಸುಮಾರು ಹತ್ತು ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಅಮೆರಿಕಕ್ಕೆ ತೆರಳಿದ್ದ ನವೀದ್ ಅಲ್ಲಿಯೇ ಕುಟುಂಬದೊಂದಿಗೆ ನೆಲೆಸಿದ್ದರು. ಮಗನಿಗೆ ಕರೆ ಮಾಡಿದ ವೇಳೆ ಅಮೆರಿಕದ ಪೊಲೀಸರಿಂದ ಅಪಘಾತದ ಮಾಹಿತಿ ತಿಳಿದುಬಂದಿದೆ ಎಂದು ನವೀದ್ ಅವರ ತಂದೆ ಶೇಖ್ ಅಬ್ದುಲ್ ಸಯೀದ್ ತಿಳಿಸಿದ್ದಾರೆ.
ಮೃತರ ಕುಟುಂಬ ಸದಸ್ಯರು ತುರ್ತಾಗಿ ಅಮೆರಿಕಕ್ಕೆ ತೆರಳಲು ಅವಕಾಶ ಕಲ್ಪಿಸುವಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ ಮಜ್ಲಿಸ್ ಬಚಾವೋ ತೆಹ್ರೀಕ್ ಸಂಘಟನೆಯ ವಕ್ತಾರ ಅಮ್ಜದ್ ಉಲ್ಲಾ ಖಾನ್ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದು, ತುರ್ತು ವೀಸಾ ವ್ಯವಸ್ಥೆ ಕಲ್ಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.



