ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ವಂಚಿಸಿದ ಆರೋಪ ಎದುರಿಸುತ್ತಿರುವ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಗಾದಿಲಿಂಗಪ್ಪ ವಿರುದ್ಧದ ತನಿಖೆಯನ್ನು ಮುಂದುವರಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಆದರೆ, ಪ್ರಕರಣದಲ್ಲಿ ಆರೋಪಿಯಾಗಿದ್ದ ಪಿಎಸ್‌ಐ ಅವರ ತಾಯಿ ವಿರುದ್ಧದ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಪಿಎಸ್‌ಐ ಗಾದಿಲಿಂಗಪ್ಪ ಹಾಗೂ ಅವರ ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ನ್ಯಾಯಪೀಠವು, ಪಿಎಸ್‌ಐ ಅವರ ತಾಯಿ ವಿರುದ್ಧ ಮಾಡಿರುವ ಆರೋಪಗಳು ಪ್ರಾಥಮಿಕವಾಗಿ ಅಸಂಭವವಾಗಿರುವುದರಿಂದ ಅವರ ವಿರುದ್ಧದ ತನಿಖೆಗೆ ತಾತ್ಕಾಲಿಕ ತಡೆ ನೀಡಿದೆ. ಆದರೆ, ಮೊದಲನೇ ಆರೋಪಿಯಾಗಿರುವ ಪಿಎಸ್‌ಐ ವಿರುದ್ಧದ ಆರೋಪಗಳ ಕುರಿತು ತನಿಖೆಯನ್ನು ಪೊಲೀಸರು ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿದೆ.
ಇದಲ್ಲದೆ, ದೂರುದಾರರು ಈ ಹಿಂದೆ ದಾಖಲಿಸಿದ್ದ ಮೊದಲ ದೂರುವನ್ನು ಹಿಂಪಡೆದಿರುವುದನ್ನೇ ಆಧಾರವನ್ನಾಗಿ ಮಾಡಿಕೊಂಡು ತನಿಖೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ
ನ್ಯಾಯಾಲಯದ ಆದೇಶದ ಪ್ರಕಾರ, ದೂರುದಾರೆ ವಕೀಲರಾಗಿದ್ದು, ಪಿಎಸ್‌ಐ ಗಾದಿಲಿಂಗಪ್ಪ ಅವರೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದರು. ಬಳಿಕ ಇಬ್ಬರ ನಡುವೆ ಸಂದೇಶಗಳ ವಿನಿಮಯ ನಡೆದು ಸ್ನೇಹ ಪ್ರೀತಿಗೆ ತಿರುಗಿದೆ. ಈ ವೇಳೆ ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ ನಂತರ ಮದುವೆಯಾಗದೆ ವಂಚಿಸಿದ್ದಾರೆ ಎಂದು ದೂರುದಾರೆ ಆರೋಪಿಸಿದ್ದಾರೆ.
ಈ ಸಂಬಂಧ ದೂರುದಾರರು ಮೊದಲಿಗೆ ಪಿಎಸ್‌ಐ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ ಆ ದೂರುವನ್ನು ಹಿಂಪಡೆದ ಹಿನ್ನೆಲೆಯಲ್ಲಿ ಪೊಲೀಸರು ‘ಬಿ’ ವರದಿ ಸಲ್ಲಿಸಿದ್ದರು. ನಂತರ ಮತ್ತೊಮ್ಮೆ ದೂರು ದಾಖಲಿಸಿದ ಮಹಿಳೆ, ದೂರು ಹಿಂಪಡೆಯುವಂತೆ ತಮ್ಮ ಮೇಲೆ ಒತ್ತಡ ಹಾಗೂ ಬೆದರಿಕೆ ಹೇರಲಾಗಿತ್ತು ಎಂದು ಆರೋಪಿಸಿದ್ದರು.
ಈ ಎರಡನೇ ಎಫ್‌ಐಆರ್ ಅನ್ನು ರದ್ದುಪಡಿಸುವಂತೆ ಕೋರಿ ಪಿಎಸ್‌ಐ ಹಾಗೂ ಅವರ ತಾಯಿ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪಿಎಸ್‌ಐ ವಿರುದ್ಧದ ತನಿಖೆ ಮುಂದುವರಿಸಲು ಅವಕಾಶ ನೀಡಿದ್ದು, ತಾಯಿ ವಿರುದ್ಧದ ತನಿಖೆಗೆ ಮಾತ್ರ ತಾತ್ಕಾಲಿಕ ತಡೆ ನೀಡಿದೆ.



