ಬೆಂಗಳೂರು: ಟೆಸ್ಟ್ ಡ್ರೈವ್ ವೇಳೆ ಮಹಿಳೆ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಫುಟ್ಪಾತ್ ಮೇಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ನಡೆದಿದೆ.
ಕೆ.ಆರ್.ಪುರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಯ್ಯನಪಾಳ್ಯ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಟೆಸ್ಟ್ ಡ್ರೈವ್ಗಾಗಿ ತೆಗೆದುಕೊಂಡಿದ್ದ ಕೆಂಪು ಬಣ್ಣದ ಶಿಫ್ಟ್ ಡಿಸೈರ್ ಕಾರು ಚಲಾಯಿಸುತ್ತಿದ್ದ ವೇಳೆ ಏಕಾಏಕಿ ನಿಯಂತ್ರಣ ತಪ್ಪಿದೆ.
ನಿಯಂತ್ರಣ ಕಳೆದುಕೊಂಡ ಕಾರು ಫುಟ್ಪಾತ್ ಮೇಲೆ ಹತ್ತಿ ಅಲ್ಲಿದ್ದ ಎಲೆಕ್ಟ್ರಿಕ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಕಾರು ಚಾಲನೆ ಮಾಡುತ್ತಿದ್ದ ಮಹಿಳೆ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಘಟನೆ ಮಾಹಿತಿ ತಿಳಿದ ತಕ್ಷಣ ಕೆ.ಆರ್.ಪುರಂ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆ ವಿರುದ್ಧ ನಿರ್ಲಕ್ಷ್ಯ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ವೇಳೆ ದೊಡ್ಡ ಅನಾಹುತವೊಂದು ತಪ್ಪಿದೆ. ಕಾರು ಡಿಕ್ಕಿ ಹೊಡೆದ ವಿದ್ಯುತ್ ಕಂಬದ ಮುಂದೆಯೇ ಬಸ್ ನಿಲ್ದಾಣವಿತ್ತು. ಕಂಬ ಇಲ್ಲದಿದ್ದರೆ ಕಾರು ನೇರವಾಗಿ ಬಸ್ ನಿಲ್ದಾಣಕ್ಕೆ ನುಗ್ಗುವ ಸಾಧ್ಯತೆ ಇತ್ತು. ಹಗಲು ಹೊತ್ತಿನಲ್ಲಿ ಘಟನೆ ನಡೆದಿದ್ದರಿಂದ ಪ್ರಯಾಣಿಕರ ಜೀವಕ್ಕೂ ಅಪಾಯ ಎದುರಾಗಬಹುದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.



