ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದೆ ಸೋತ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಸೂದೆಗೆ ಬೆಂಬಲ ನೀಡದೆ ವಿರೋಧ ಪಕ್ಷ ತಪ್ಪು ಮಾಡಿದ್ದು, ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಮ್ಮ ಸಂಪುಟ ಸಭೆಯಲ್ಲಿ ತಿಳಿಸಿದ್ದಾರೆ. ಸರ್ಕಾರದ ಕ್ರಮಗಳ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದ ನಡುವೆಯೇ ಈ ಮಹತ್ವದ ಮಸೂದೆ ಸಂಸತ್ತಿನಲ್ಲಿ ಅಗತ್ಯ ಬೆಂಬಲ ಪಡೆಯಲು ವಿಫಲವಾಗಿದೆ.
ಸಂವಿಧಾನ (131ನೇ ತಿದ್ದುಪಡಿ) ಮಸೂದೆಯು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶ ಹೊಂದಿತ್ತು. ಆದರೆ, ಲೋಕಸಭೆಯಲ್ಲಿ ಅಂಗೀಕಾರಕ್ಕೆ ಬೇಕಾದ ಮೂರನೇ ಎರಡರಷ್ಟು ಬಹುಮತ ದೊರಕಲಿಲ್ಲ.
ಗುರುವಾರ ನಡೆದ ದೀರ್ಘ ಚರ್ಚೆಯ ಬಳಿಕ ಮತದಾನ ನಡೆದಿದ್ದು, ಮಸೂದೆಗೆ 298 ಮತಗಳು ಪರವಾಗಿ ಬಿದ್ದರೆ, 230 ಸದಸ್ಯರು ವಿರೋಧಿಸಿದರು. ಈ ಹಿನ್ನೆಲೆಯಲ್ಲಿ ಮಸೂದೆ ಅಂಗೀಕಾರವಾಗಲಿಲ್ಲ.
ವಿರೋಧ ಪಕ್ಷದ ಈ ನಿಲುವಿನಿಂದ ದೇಶದ ಮಹಿಳೆಯರು ನಿರಾಸೆಯಾಗಿದ್ದಾರೆ. ಈ ವಿಚಾರವನ್ನು ದೇಶದ ಪ್ರತಿಯೊಂದು ಹಳ್ಳಿ-ಹಳ್ಳಿಗೂ ತಲುಪಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.



