ಮೈಸೂರು/ಹಾಸನ: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತಪಟ್ಟ ಘಟನೆ ಪಿರಿಯಾಪಟ್ಟಣದ ದೊಡ್ಡ ಹರವೆ ಗ್ರಾಮದ ಬಳಿ ನಡೆದಿದೆ. ಗಣೇಶ್ (22) ಮತ್ತು ಇಮ್ರಾನ್ (28) ಮೃತರು.
ನಾಲ್ವರು ಯುವಕರು ಈಜಲು ನದಿಗೆ ಇಳಿದ ವೇಳೆ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಗಣೇಶ್ ಮೃತದೇಹ ಪತ್ತೆಯಾಗಿದ್ದು, ಇಮ್ರಾನ್ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಸಂಬಂಧ ಬೈಲಕುಪ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ವೇಳೆ, ಇತ್ತೀಚೆಗೆ ಅರ್ಕೇಶ್ವರ ದೇಗುಲ ಸಮೀಪ ಕಾವೇರಿ ನದಿಯಲ್ಲಿ ಆರು ಮಂದಿ ಮುಳುಗಿ ಮೃತಪಟ್ಟ ಘಟನೆ ಸಂಭವಿಸಿದ್ದರಿಂದ ಆತಂಕ ಇನ್ನಷ್ಟು ಹೆಚ್ಚಾಗಿದೆ. ನೀರಿನ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳ ಅಗತ್ಯತೆ ಮತ್ತೊಮ್ಮೆ ಹೊರಹೊಮ್ಮಿದೆ.



