ವಿಜಯನಗರ: ಹೊಸಪೇಟೆ ತಾಲೂಕಿನ ಡಾಣಾಪುರ ಬಳಿಯ NH-50ರಲ್ಲಿ ನಡೆದ ಸರಣಿ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.
ಮಗನ ಮದುವೆಗೆ ಕನ್ಯೆ ನೋಡಲು ಬೈಕ್‌ನಲ್ಲಿ ತೆರಳುತ್ತಿದ್ದ ನಾಗಪ್ಪ, ಸುಜಾತಾ ಹಾಗೂ ಕೊಟ್ರೇಶ್ ಜೊತೆಗಿದ್ದ ಹಮಾಲಿ ದುರ್ಗಪ್ಪ ಸೇರಿ ನಾಲ್ವರು ಲಾರಿ ಡಿಕ್ಕಿಗೆ ಬಲಿಯಾಗಿದ್ದಾರೆ.
ಚಿತ್ರದುರ್ಗ ಕಡೆಗೆ ಬೆಳ್ಳುಳ್ಳಿ ಸಾಗಿಸುತ್ತಿದ್ದ ಲಾರಿ ಅತಿವೇಗದಲ್ಲಿ ಬಂದಿದ್ದು, ಬೈಕ್‌ಗೆ ಡಿಕ್ಕಿ ಹೊಡೆದು ಬಳಿಕ ಕಾರು ಮತ್ತು KSRTC ಬಸ್‌ಗೆ ತಗುಲಿ ಪಲ್ಟಿಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಘಟನೆಯ ರಭಸಕ್ಕೆ ಸ್ಥಳದಲ್ಲೇ ದಾರುಣ ಸಾವು ಸಂಭವಿಸಿದ್ದು, ದೃಶ್ಯಗಳು ಭೀಕರವಾಗಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.
ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣವೆಂದು ಶಂಕಿಸಲಾಗಿದೆ.



