ಶಿವಮೊಗ್ಗ: ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿ 9 ವರ್ಷದ ಬಾಲಕಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಬಾಲಕಿಯನ್ನು ಶಿವಮೊಗ್ಗ ನಗರದ ವಿದ್ಯಾನಗರ ನಿವಾಸಿ ಪ್ರಣಮ್ಯ ಎಂದು ಗುರುತಿಸಲಾಗಿದೆ. ಈ ಘಟನೆ ಕುಟುಂಬದಲ್ಲಿ ಆಘಾತ ಮೂಡಿಸಿದ್ದು, ಪೋಷಕರ ಆಕ್ರಂದನ ಮನಕಲಕುವಂತಿದೆ.
ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರಣಮ್ಯ ಒಂದು ವಾರದ ಹಿಂದೆ ಚಿಕ್ಕಮ್ಮನ ಮನೆ ಲಕ್ಕಿನಕೊಪ್ಪಕ್ಕೆ ಬಂದಿದ್ದಳು. ಏಪ್ರಿಲ್ 20ರಂದು ಚಿಕ್ಕಮ್ಮನ ಮಕ್ಕಳು ಕಿರಿಕಿರಿ ಮಾಡುತ್ತಿದ್ದ ಹಿನ್ನೆಲೆ, ಪ್ರಣಮ್ಯ ಒಬ್ಬಳೇ ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡು ಪಂಚೆ ಬಳಸಿ ಜೋಕಾಲಿ ಮಾಡಿಕೊಂಡು ಆಟವಾಡುತ್ತಿದ್ದಳು.
ಈ ವೇಳೆ ಪಂಚೆಯ ಕುಣಿಕೆ ಕುತ್ತಿಗೆಗೆ ಬಿಗಿದ ಪರಿಣಾಮ ಉಸಿರಾಟಕ್ಕೆ ತೊಂದರೆ ಉಂಟಾಗಿ ಬಾಲಕಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಕುಟುಂಬಸ್ಥರು ಬಾಗಿಲು ತೆರೆಯುವಷ್ಟರಲ್ಲಿ ಪ್ರಣಮ್ಯ ಪ್ರಾಣ ಕಳೆದುಕೊಂಡಿದ್ದಳು.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಮಕ್ಕಳ ಸುರಕ್ಷತೆ ಕುರಿತು ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



