ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ (CID) ತನಿಖೆ ತೀವ್ರಗೊಂಡಿದ್ದು, ತನಿಖೆ ಮುಂದುವರಿದಂತೆ ಆಘಾತಕಾರಿ ಹಾಗೂ ಸ್ಫೋಟಕ ವಿವರಗಳು ಬಯಲಾಗುತ್ತಿವೆ. ಹಗರಣದ ಪ್ರಮುಖ ಆರೋಪಿಯಾಗಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್, ಅಭ್ಯರ್ಥಿಗಳಿಂದ ಅಕ್ರಮವಾಗಿ ವಸೂಲಿ ಮಾಡಿದ ಕೋಟ್ಯಂತರ ರೂಪಾಯಿ ಹಣದಲ್ಲಿ ಐಷಾರಾಮಿ ಜೀವನ ನಡೆಸಿದ್ದು, ಮೋಜು-ಮಸ್ತಿಗೆ ಬಳಸಿಕೊಂಡಿರುವುದು ಸಿಐಡಿ ತನಿಖೆಯಲ್ಲಿ ದೃಢಪಟ್ಟಿದೆ.
ಗೆಳತಿಗೆ 26 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣ ಗಿಫ್ಟ್: ಬಂಧಿತ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್, ತಮ್ಮ ಅಯೋಧ್ಯೆ ಮೂಲದ ಗರ್ಲ್ಫ್ರೆಂಡ್ಗೆ ಭಾರಿ ಮೌಲ್ಯದ ಆಭರಣಗಳನ್ನು ಉಡುಗೊರೆಯಾಗಿ ನೀಡಿರುವುದು ಪತ್ತೆಯಾಗಿದೆ. ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ ಪ್ರಸಿದ್ಧ ಜ್ಯುವೆಲ್ಲರಿ ಶಾಪ್ಗೆ ಗೆಳತಿಯನ್ನು ಕರೆದುಕೊಂಡು ಹೋಗಿದ್ದ ಗ್ಯಾನೇಂದ್ರ, ಅಲ್ಲಿ ಬರೋಬ್ಬರಿ 26 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿ ನೀಡಿದ್ದಾರೆ.
ಬೀದರ್ನ ಲಕ್ಷ್ಮಿ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಖಾತೆಯಲ್ಲಿದ್ದ ಬಸವರಾಜ್ ಎಂಬುವವರ ಅಕೌಂಟ್ನಿಂದ ಈ ಆಭರಣ ಖರೀದಿಗೆ ಬಿಲ್ ಪಾವತಿಸಲಾಗಿತ್ತು. ಸದ್ಯ ಈ ಬಿಲ್ ಅನ್ನು ಸಿಐಡಿ ಜಫ್ತಿ ಮಾಡಿದ್ದು, ಆಭರಣ ಖರೀದಿಸುತ್ತಿದ್ದ ವೇಳೆ ತೆಗೆದ ಫೋಟೋ ಸಾಕ್ಷ್ಯಗಳೂ ಲಭ್ಯವಾಗಿವೆ. ಅಷ್ಟೇ ಅಲ್ಲದೆ, ಉಡುಗೊರೆ ಪಡೆದ ಆತನ ಗೆಳತಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ಜಾರಿ ಮಾಡಿದೆ.
ವಿಮಾನ ನಿಲ್ದಾಣ ಸಮೀಪ ಐಷಾರಾಮಿ ವಿಲ್ಲಾ ಖರೀದಿ: ಅಕ್ರಮ ಹಣದ ಮೂಲಕ ಗ್ಯಾನೇಂದ್ರ ಕುಮಾರ್ ತಮ್ಮ ಸಹೋದರ ಕಮಲಾಪತಿ ಹೆಸರಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಐಷಾರಾಮಿ ವಿಲ್ಲಾ ಒಂದನ್ನು ಖರೀದಿಸಿದ್ದಾರೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ವಿಲ್ಲಾವನ್ನು ಅಕ್ರಮ ಹಣದಿಂದಲೇ ಖರೀದಿಸಲಾಗಿದೆಯೇ ಎಂಬ ಆಯಾಮದಲ್ಲಿ ಸಿಐಡಿ ಅಧಿಕಾರಿಗಳು ತೀವ್ರ ತನಿಖೆ ಮುಂದುವರಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಿ ಡ್ರಿಲ್ ಶುರು: 2024ರ ಫೆಬ್ರವರಿಯಿಂದ 2026ರ ಮಾರ್ಚ್ವರೆಗೆ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿ (Exam Controller) ಕರ್ತವ್ಯ ನಿರ್ವಹಿಸಿದ್ದ ಗ್ಯಾನೇಂದ್ರ ಕುಮಾರ್, ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳನ್ನು ವಿಚಾರಣೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ.
ಹೀಗಾಗಿ ಅಕ್ರಮ ಹಣ ವರ್ಗಾವಣೆ (Money Laundering) ಶಂಕೆಯಡಿಯಲ್ಲಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು, ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಹಾಗೂ ಬಸವರಾಜ್ ಕನ್ನಾಳೆಗೆ ಎರಡು ದಿನಗಳ ಕಾಲ ಜೈಲಿನಲ್ಲೇ ಸುದೀರ್ಘ ವಿಚಾರಣೆ ನಡೆಸುತ್ತಿದ್ದಾರೆ. ಇಡಿ ಅಧಿಕಾರಿಗಳು ಈಗಾಗಲೇ ಗ್ಯಾನೇಂದ್ರ ಅವರ ಮನೆ ಸೇರಿದಂತೆ ಸುಮಾರು 21 ಸ್ಥಳಗಳಲ್ಲಿ ಶೋಧ ಕಾರ್ಯ ಪೂರ್ಣಗೊಳಿಸಿದ್ದಾರೆ.



