ದಾವಣಗೆರೆ:- ದಾವಣಗೆರೆ ತಾಲೂಕಿನ ನಾಗರಸನಹಳ್ಳಿ ಬಳಿ ಕುರಿಗಳು ತೋಟಕ್ಕೆ ನುಗ್ಗಿದವು ಎಂಬ ಕ್ಷುಲ್ಲಕ ಕಾರಣಕ್ಕಾಗಿ ಜಮೀನು ಮಾಲೀಕರು ಕುರಿಗಾಹಿ ತಂದೆ-ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ನಡೆದಿದೆ.
ಘಟನೆಯಲ್ಲಿ ನಾಗರಾಜ್(18) ಮತ್ತು ಬಾಳಪ್ಪ(40) ಎಂಬ ಕುರಿಗಾಹಿಗಳು ಹಲ್ಲೆಗೊಳಗಾಗಿದ್ದಾರೆ. ಆರೋಪಿಗಳು, ಹಲ್ಲೆ ಮಾಡಿದ್ದಲ್ಲದೆ ಜೆಸಿಬಿಯಿಂದ ಗುಂಡಿ ತೆಗೆದು ಹೂತು ಹಾಕುವುದಾಗಿ ಬೆದರಿಕೆ ಕೂಡ ಹಾಕಲಾಗಿದೆ. ಘಟನೆ ಸಂಬಂಧ ಹದಡಿ ಪೊಲೀಸ್ ಠಾಣೆಗೆ ಗಾಯಾಳು ಬಾಳಪ್ಪ ದೂರು ನೀಡಿದ್ದಾರೆ. ಕಾರಿಗನೂರು ಗ್ರಾಮದ ನಿವಾಸಿಗಳಾದ ಪ್ರಕಾಶ್ ಮತ್ತು ವೀರೇಶ್ ಎಂಬುವವರು ಮೊದಲು ನಾಗರಾಜ್ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ.
ಜಮೀನು ಮಾಲೀಕರು ಮನಸೋಇಚ್ಛೆ ಥಳಿಸಿದಕ್ಕೆ ನಾಗರಾಜ್ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಮಗನ ಸ್ಥಿತಿ ಕಂಡು ಗಾಬರಿಯಾಗಿ ಪ್ರಶ್ನಿಸಲು ಹೋದ ತಂದೆ ಬಾಳಪ್ಪ ಅವರ ಮೇಲೂ ಜಮೀನು ಮಾಲೀಕರು ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಇನ್ನೊಮ್ಮೆ ಕುರಿಗಳು ಅಡಕೆ ತೋಟಕ್ಕೆ ನುಗ್ಗಿದರೆ ನಿಮ್ಮನ್ನು ಬಿಡುವುದಿಲ್ಲ. ಜೆಸಿಬಿಯಿಂದ ಗುಂಡಿ ತೆಗೆದು ಇಲ್ಲೇ ಹೂತು ಹಾಕಿಬಿಡುತ್ತೇವೆ ಎಂದು ಜಮೀನು ಮಾಲೀಕರು ಕುರಿಗಾಹಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಸದ್ಯ ಗಂಭೀರವಾಗಿ ಗಾಯಗೊಂಡಿರುವ ನಾಗರಾಜ್ ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ತಮ್ಮ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಪ್ರಕಾಶ್ ಮತ್ತು ವೀರೇಶ್ ವಿರುದ್ಧ ಗಾಯಾಳು ಬಾಳಪ್ಪ ಅವರು ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



