ಬೆಂಗಳೂರು: ರಾಜ್ಯ ಸರ್ಕಾರ ಪ್ರಕಟಿಸಿರುವ ಒಳಮೀಸಲಾತಿ ನಿರ್ಧಾರವು ಕೇವಲ ಕಣ್ಣೊರೆಸು ತಂತ್ರವಾಗಿದ್ದು, ಇದರಿಂದ ದಲಿತ ಸಮುದಾಯಗಳಿಗೆ ಸಮರ್ಪಕ ನ್ಯಾಯ ಸಿಗುವುದಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ಟೀಕೆ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ಈ ನಿರ್ಧಾರ ಅವೈಜ್ಞಾನಿಕವಾಗಿದ್ದು, ದಲಿತ ಸಮುದಾಯವನ್ನು ಇನ್ನಷ್ಟು ಗೊಂದಲಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು.
ಮೀಸಲಾತಿ ಅನ್ವಯವಾಗದ ಹುದ್ದೆಗಳನ್ನು ‘ಜನರಲ್ ಎಸ್ಸಿ’ ಎಂದು ಕರೆಯುವುದರಿಂದ ಅದು ಒಳಮೀಸಲಾತಿ ಆಗುವುದಿಲ್ಲ. ಇದು ಕೇವಲ ಗೊಂದಲ ಸೃಷ್ಟಿಸುವ ಪ್ರಯತ್ನ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಳಮೀಸಲಾತಿ ಜಾರಿಗೆ ತರುವುದಕ್ಕೆ ಸರ್ಕಾರಕ್ಕೆ ಮೂರು ವರ್ಷ ಬೇಕಾಗಿಲ್ಲ.
ಈ ಪ್ರಕ್ರಿಯೆಯನ್ನು ಮೂರೇ ತಿಂಗಳಲ್ಲಿ ಪೂರ್ಣಗೊಳಿಸಬಹುದಾಗಿತ್ತು. ಯುವ ಹೋರಾಟಗಾರರ ಒತ್ತಡದಿಂದ ತಪ್ಪಿಸಿಕೊಳ್ಳಲು ಸರ್ಕಾರ ತುರ್ತಾಗಿ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ಟೀಕಿಸಿದರು. ಇದೇ ವೇಳೆ, ಸಚಿವ ಸಂಪುಟ ಸಭೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಜರಾಗಿರಲಿಲ್ಲ ಎಂಬುದನ್ನು ಉಲ್ಲೇಖಿಸಿದ ಅವರು,
ಈ ನಿರ್ಧಾರ ತೃಪ್ತಿಕರವಾಗಿಲ್ಲ ಎಂಬುದು ಅವರಿಗೆ ತಿಳಿದಿತ್ತು ಎಂದು ಹೇಳಿದರು. ಸಚಿವ ಮುನಿಯಪ್ಪ ಅವರಿಗೆ ‘ಸಂತೋಷದಿಂದ ಮಾತನಾಡಿ’ ಎಂದು ಮುಖ್ಯಮಂತ್ರಿಗಳು ಸೂಚಿಸಿರುವುದರಿಂದಲೇ ಕಾಂಗ್ರೆಸ್ನ ದಲಿತ ನಾಯಕರಿಗೂ ಈ ನಿರ್ಧಾರದ ಬಗ್ಗೆ ಅಸಮಾಧಾನವಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.



