ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಕೇಬಲ್‌ಗಳು ಕಟ್ ಆಗಿರುವುದು ಭದ್ರತಾ ವಲಯದಲ್ಲಿ ಭಾರೀ ಆತಂಕ ಹುಟ್ಟಿಸಿತ್ತು.
ಪ್ರಾರಂಭದಲ್ಲಿ ಇದು ವಿಧ್ವಂಸಕ ಕೃತ್ಯವಾಗಿರಬಹುದು ಎಂಬ ಅನುಮಾನದಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ತನಿಖೆ ಆರಂಭಿಸಿತ್ತು. ಆದರೆ ವಿಚಾರಣೆಯಲ್ಲಿ ಅಚ್ಚರಿಯ ಕಾರಣ ಬಹಿರಂಗವಾಗಿದೆ.
ಕ್ರೀಡಾಂಗಣದ ಸಿಸಿಟಿವಿ ನಿರ್ವಹಣೆಯನ್ನು ನೋಡುತ್ತಿದ್ದ IVS ಡಿಜಿಟಲ್ ಸೊಲ್ಯೂಷನ್ ಸಂಸ್ಥೆಯ ಸಬ್-ಕಾಂಟ್ರಾಕ್ಟ್ ಸಿಬ್ಬಂದಿಗಳಾದ ಮಂಜುನಾಥ್ ಮತ್ತು ಅಬ್ದುಲ್ ಕಲಾಂ ಈ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಸಂಬಳ ಬಾಕಿ ಇಟ್ಟಿದ್ದಕ್ಕೆ ಕೋಪಗೊಂಡ ಇಬ್ಬರೂ ಸಂಸ್ಥೆಗೆ ‘ಪಾಠ ಕಲಿಸಲು’ ಉದ್ದೇಶಪೂರ್ವಕವಾಗಿ ಕೇಬಲ್ ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂದ್ಯದ ದಿನವೇ ಪ್ರಮುಖ ಕೇಬಲ್‌ಗಳನ್ನು ಯಾರಿಗೂ ಅನುಮಾನ ಬಾರದಂತೆ ಕತ್ತರಿಸಲಾಗಿದ್ದು, ಸಂಜೆ ವೇಳೆಗೆ ಸಿಸಿಟಿವಿ ಫೀಡ್ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಬೆಳವಣಿಗೆ ಪೊಲೀಸರನ್ನೂ ಭದ್ರತಾ ಸಿಬ್ಬಂದಿಯನ್ನೂ ಕೆಲಕಾಲ ಕಂಗಾಲು ಮಾಡಿತ್ತು.



