HomeBengaluru Newsಸ್ವಿಗ್ಗಿ ವಿರುದ್ಧ ಸಿಡಿದೆದ್ದ ಹೋಟೆಲ್ ಮಾಲೀಕರು; ಆರ್ಡರ್ ಸ್ಥಗಿತಕ್ಕೆ ಆಗಸ್ಟ್ 15 ಡೆಡ್‌ಲೈನ್!

ಸ್ವಿಗ್ಗಿ ವಿರುದ್ಧ ಸಿಡಿದೆದ್ದ ಹೋಟೆಲ್ ಮಾಲೀಕರು; ಆರ್ಡರ್ ಸ್ಥಗಿತಕ್ಕೆ ಆಗಸ್ಟ್ 15 ಡೆಡ್‌ಲೈನ್!

For Dai;y Updates Join Our whatsapp Group

ಬೆಂಗಳೂರು: ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿಗೆ ಬೆಂಗಳೂರಿನಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಅನಗತ್ಯ ಕಮಿಷನ್ ಕಡಿತ, ಪಾವತಿಗಳಲ್ಲಿ ಪಾರದರ್ಶಕತೆಯ ಕೊರತೆ ಹಾಗೂ ಅನುಮತಿಯಿಲ್ಲದೆ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಣ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಬೆಂಗಳೂರು ಹೋಟೆಲ್‌ಗಳ ಸಂಘ ಸೇರಿದಂತೆ ಹಲವು ಹೋಟೆಲ್ ಮಾಲೀಕರ ಸಂಘಟನೆಗಳು ಸ್ವಿಗ್ಗಿ ವಿರುದ್ಧ ಬಾಯ್‌ಕಾಟ್‌ಗೆ ಮುಂದಾಗಿವೆ.

ಆಗಸ್ಟ್ 15ರಿಂದ ಸ್ವಿಗ್ಗಿ ಮೂಲಕ ಆರ್ಡರ್ ಸ್ವೀಕರಿಸುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಬಗ್ಗೆ ಸಂಘಟನೆಗಳು ಗಂಭೀರ ತೀರ್ಮಾನ ಕೈಗೊಂಡಿವೆ. ಸಮಸ್ಯೆಗಳನ್ನು ಬಗೆಹರಿಸಲು ಸ್ವಿಗ್ಗಿಗೆ ಆಗಸ್ಟ್ 15ರವರೆಗೆ 15 ದಿನಗಳ ಅಂತಿಮ ಗಡುವು ನೀಡಲಾಗಿದೆ.

ಕಳೆದ ಸುಮಾರು 10 ತಿಂಗಳಿನಿಂದ ಸ್ವಿಗ್ಗಿ ಜೊತೆ ಮಾತುಕತೆ ನಡೆಸುತ್ತಿದ್ದರೂ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಅನಿವಾರ್ಯವಾಗಿ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಹೋಟೆಲ್ ಸಂಘಟನೆಗಳು ತಿಳಿಸಿವೆ.

ಸ್ವಿಗ್ಗಿ ವಿರುದ್ಧ ಹೋಟೆಲ್ ಮಾಲೀಕರ ಆರೋಪವೇನು?

ಸ್ವಿಗ್ಗಿ ಹೋಟೆಲ್ ಮಾಲೀಕರ ಅನುಮತಿಯಿಲ್ಲದೆ ಪ್ರಚಾರ ವೆಚ್ಚ, ಕ್ಲಿಕ್ ವೆಚ್ಚ, ಕಸ್ಟಮರ್ ಅಕ್ವಿಸಿಷನ್ (CPA) ಹಾಗೂ ಜಾಹೀರಾತು ಶುಲ್ಕಗಳ ಹೆಸರಿನಲ್ಲಿ ಹಣ ಕಡಿತ ಮಾಡುತ್ತಿದೆ ಎಂದು ಸಂಘಟನೆಗಳು ಆರೋಪಿಸಿವೆ.

ಬೆಂಗಳೂರು ಹೋಟೆಲ್‌ಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಮಾತನಾಡಿ, ಸಾಮಾನ್ಯ ಸೇವಾ ಶುಲ್ಕಕ್ಕೆ ತಮ್ಮ ವಿರೋಧವಿಲ್ಲ. ಆದರೆ ಸೇವಾ ಶುಲ್ಕ, ಪೇಔಟ್ ಶುಲ್ಕ, ಮ್ಯಾಪ್-ಅಪ್ ಶುಲ್ಕ ಸೇರಿದಂತೆ ವಿವಿಧ ಹೆಸರಿನಲ್ಲಿ ಹೆಚ್ಚಿನ ಮೊತ್ತ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

“1 ಲಕ್ಷ ರೂಪಾಯಿ ಮೌಲ್ಯದ ಆರ್ಡರ್ ಹಣದಲ್ಲಿ ಹೋಟೆಲ್ ಮಾಲೀಕರಿಗೆ ಕೇವಲ 40 ಸಾವಿರದಿಂದ 50 ಸಾವಿರ ರೂಪಾಯಿ ಮಾತ್ರ ಸಿಗುವ ಪರಿಸ್ಥಿತಿ ಇದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಹಕರಿಂದ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕಾದ ಜಿಎಸ್‌ಟಿ ಮೊತ್ತಕ್ಕೂ ಸ್ವಿಗ್ಗಿ ಸೇವಾ ಶುಲ್ಕ ವಿಧಿಸುತ್ತಿದೆ ಎಂಬ ಗಂಭೀರ ಆರೋಪವನ್ನೂ ಹೋಟೆಲ್ ಸಂಘಟನೆಗಳು ಮಾಡಿವೆ.

ಹೋಟೆಲ್ ಸಂಘಟನೆಗಳ ಪ್ರಮುಖ ಬೇಡಿಕೆಗಳು;

ಹೋಟೆಲ್ ಮಾಲೀಕರು ಸ್ವಿಗ್ಗಿ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ.

  • ಪ್ರತಿಯೊಂದು ಆರ್ಡರ್‌ನ ಕಮಿಷನ್, ಜಿಎಸ್‌ಟಿ, ಜಾಹೀರಾತು ವೆಚ್ಚ ಹಾಗೂ ರಿಯಾಯಿತಿ ವಿವರಗಳನ್ನು ಪ್ರತ್ಯೇಕವಾಗಿ ತೋರಿಸುವ ಸ್ಪಷ್ಟ ಬಿಲ್ ನೀಡಬೇಕು.
  • ಅನಗತ್ಯ ಜಾಹೀರಾತು ಮತ್ತು ಪ್ರಚಾರ ಅಭಿಯಾನಗಳಿಂದ ಹೊರಬರಲು ‘ಒನ್-ಕ್ಲಿಕ್’ ಆಯ್ಕೆ ನೀಡಬೇಕು.
  • ಹೋಟೆಲ್ ಮಾಲೀಕರ ಡಿಜಿಟಲ್ ಅಥವಾ ಲಿಖಿತ ಅನುಮತಿಯಿಲ್ಲದೆ ಯಾವುದೇ ಪ್ರಚಾರ ವೆಚ್ಚ ಕಡಿತ ಮಾಡಬಾರದು.
  • 15 ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಬಾಯ್‌ಕಾಟ್:

ಹೋಟೆಲ್ ಸಂಘಟನೆಗಳು ಸ್ವಿಗ್ಗಿ ಜೊತೆಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಅವಕಾಶ ನೀಡಿವೆ.

ಮುಂದಿನ 15 ದಿನಗಳಲ್ಲಿ ಸ್ವಿಗ್ಗಿ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿದರೆ ಸೇವೆ ಮುಂದುವರಿಸಲಾಗುವುದು. ಇಲ್ಲವಾದರೆ ಬಾಯ್‌ಕಾಟ್ ಮಾಡುವುದನ್ನು ಬಿಟ್ಟು ಬೇರೆ ದಾರಿ ಇಲ್ಲ ಎಂದು ಪಿ.ಸಿ. ರಾವ್ ತಿಳಿಸಿದ್ದಾರೆ.

ಇದರಿಂದ ಗ್ರಾಹಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ರೂಪಿಸುವುದಾಗಿಯೂ ಹೋಟೆಲ್ ಸಂಘಟನೆಗಳು ಮಾಹಿತಿ ನೀಡಿವೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img