ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಒಳಕಲಹ ಮತ್ತಷ್ಟು ತೀವ್ರಗೊಂಡಿದ್ದು, ಈ ಬೆಳವಣಿಗೆಗಳ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಮುಖ್ಯಮಂತ್ರಿ ಹುದ್ದೆಯತ್ತ ಆಸಕ್ತಿ ತೋರಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಪೈಪೋಟಿಯಿಂದ ರಾಜ್ಯ ಸರ್ಕಾರವೇ ಗೊಂದಲದ ಗೂಡಾಗಿದೆ ಎಂದು ಟೀಕಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ಮುಂದೆ ನನ್ನ ಪರ್ವ” ಎಂದು ಹೇಳುತ್ತಿರುವ ಸಂದರ್ಭದಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರ ಇತ್ತೀಚಿನ ಹೇಳಿಕೆ ಮತ್ತಷ್ಟು ಗೊಂದಲ ಸೃಷ್ಟಿಸಿದೆ ಎಂದು ಅಶೋಕ್ ಹೇಳಿದರು. ಡಿ.ಕೆ. ಶಿವಕುಮಾರ್ ಅವರ ಸಿಎಂ ಕನಸಿಗೆ ಇದೀಗ ಅಡ್ಡಿ ಉಂಟಾಗಿದೆ ಎಂದೂ ವ್ಯಂಗ್ಯವಾಡಿದರು.
“ಮಲ್ಲಿಕಾರ್ಜುನ ಖರ್ಗೆ ಮಧ್ಯಪ್ರವೇಶ ಮಾಡಿ, ನನಗೂ ಸಿಎಂ ಆಗುವ ಆಸೆಯಿದೆ ಹಾಗೂ ಈ ಹಿಂದೆ ನನಗೆ ಮೋಸವಾಗಿದೆ ಎಂದು ಹೇಳಿದ್ದಾರೆ. ಬಹುಶಃ ಕಾಂಗ್ರೆಸ್ ಹೈಕಮಾಂಡ್‌ನಿಂದ ಅವರಿಗೆ ಗ್ರೀನ್ ಸಿಗ್ನಲ್ ಸಿಕ್ಕಿರಬಹುದು,” ಎಂದು ಅವರು ಹೇಳಿದರು.
ಖರ್ಗೆ ಅವರು ಈ ಹಿಂದೆ ಸಾಕಷ್ಟು ಬಾರಿ ಮುಖ್ಯಮಂತ್ರಿ ಹುದ್ದೆಗೆ ಪ್ರಯತ್ನಿಸಿದರೂ ಅವಕಾಶ ಸಿಕ್ಕಿರಲಿಲ್ಲ. ಈಗಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ ಮತ್ತೊಮ್ಮೆ ಆ ಹುದ್ದೆಗೆ ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ ಎಂದು ಅಶೋಕ್ ಅಭಿಪ್ರಾಯಪಟ್ಟರು.
ಪ್ರಸ್ತುತ ಕಾಂಗ್ರೆಸ್‌ನಲ್ಲಿ ಇಬ್ಬರ ನಡುವಿನ ಅಧಿಕಾರ ಪೈಪೋಟಿಯಿಂದ ಮೂರನೇ ವ್ಯಕ್ತಿಗೆ ಲಾಭವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ ಅವರು, ರಾಜ್ಯದ ಆಡಳಿತದ ಮೇಲೆ ಇದರ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.



