ಮಧ್ಯಪ್ರದೇಶದ: ಜಬಲ್ಪುರ್ ಸಮೀಪದ ಬರ್ಗಿ ಅಣೆಕಟ್ಟುನಲ್ಲಿ ಸಂಭವಿಸಿದ ಭೀಕರ ದೋಣಿ ದುರಂತ ದೇಶವನ್ನೇ ಬೆಚ್ಚಿಬೀಳಿಸಿದೆ. ನರ್ಮದಾ ನದಿಯಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಕ್ರೂಸ್ ದೋಣಿ ಮಗುಚಿ ಬಿದ್ದ ಪರಿಣಾಮ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನರೇಂದ್ರ ಮೋದಿ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಗುರುವಾರ ಸಂಜೆ ನಡೆದ ಈ ದುರಂತದಲ್ಲಿ ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಯ ಕ್ರೂಸ್ ದೋಣಿಯಲ್ಲಿ 40-45 ಮಂದಿ ಪ್ರಯಾಣಿಕರು ಇದ್ದರು. ಏಕಾಏಕಿ ಸುರಿದ ಭಾರೀ ಮಳೆ ಹಾಗೂ ಗಂಟೆಗೆ 60-70 ಕಿಮೀ ವೇಗದ ಗಾಳಿಯಿಂದ ದೋಣಿ ನಿಯಂತ್ರಣ ಕಳೆದುಕೊಂಡು ಜಲಾಶಯದ ಮಧ್ಯದಲ್ಲಿ ಮಗುಚಿಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇವರೆಗೆ 21 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ ಹಲವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮುಳುಗಿದ ದೋಣಿ ಸುಮಾರು 20 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದು, ಡೈವರ್‌ಗಳು, ದೋಣಿಗಳು ಮತ್ತು ಯಂತ್ರೋಪಕರಣಗಳ ಸಹಾಯದಿಂದ ರಕ್ಷಣಾ ಕಾರ್ಯ ಜೋರಾಗಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಹಾಗೂ ಸ್ಥಳೀಯ ಆಡಳಿತ ಸಕ್ರಿಯವಾಗಿ ಭಾಗವಹಿಸಿವೆ. ವೈಮಾನಿಕ ನಿಗಾವಿಗಾಗಿ ಹೆಲಿಕಾಪ್ಟರ್‌ಗಳನ್ನೂ ಬಳಸಲಾಗುತ್ತಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ರಾಜ್ಯ ಸರ್ಕಾರದಿಂದ ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರ ಘೋಷಿಸಿದ್ದು, ಘಟನೆಯ ಕುರಿತು ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.



