ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ನಡೆದಿದ್ದ ಭಾರೀ ರಾಜಕೀಯ ಕಸರತ್ತು ಅಂತಿಮ ಹಂತ ತಲುಪಿದ್ದು, ನಟ ವಿಜಯ್ ನೇತೃತ್ವದ ಟಿವಿಕೆಗೆ ವಿಸಿಕೆ ಪಕ್ಷ ನಿರ್ಣಾಯಕ ಬೆಂಬಲ ನೀಡಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಟಿವಿಕೆ ಒಕ್ಕೂಟದ ಶಾಸಕರ ಸಂಖ್ಯೆ 118ಕ್ಕೆ ಏರಿಕೆಯಾಗಿ ಬಹುಮತದ ಗಡಿ ದಾಟಿದೆ.
ಈಗಾಗಲೇ ಕಾಂಗ್ರೆಸ್‌ನ ಐದು ಹಾಗೂ ಎಡಪಕ್ಷಗಳ ನಾಲ್ಕು ಶಾಸಕರ ಬೆಂಬಲ ಹೊಂದಿದ್ದ ವಿಜಯ್ ಒಕ್ಕೂಟಕ್ಕೆ ವಿಸಿಕೆಯ ಇಬ್ಬರು ಶಾಸಕರ ಸೇರ್ಪಡೆ ದೊಡ್ಡ ಬಲ ನೀಡಿದೆ. ಸರ್ಕಾರ ರಚನೆಗೆ ಬೇಕಾಗಿದ್ದ ಮ್ಯಾಜಿಕ್ ನಂಬರ್ ಕೊನೆಗೂ ಸಿಕ್ಕ ಹಿನ್ನೆಲೆಯಲ್ಲಿ ಟಿವಿಕೆ ಶಿಬಿರದಲ್ಲಿ ಸಂಭ್ರಮ ಮನೆಮಾಡಿದೆ.
ಬಹುಮತ ಖಚಿತವಾದ ತಕ್ಷಣ ವಿಜಯ್ ತಮ್ಮ ನಿವಾಸದಿಂದ ಹೊರಟಿದ್ದು, ರಾಜ್ಯಪಾಲ ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆ ಇದೆ. ಸಂಜೆ ರಾಜ್ಯಪಾಲರು ತಿರುವನಂತಪುರಕ್ಕೆ ಪ್ರಯಾಣ ಬೆಳೆಸಲಿರುವುದರಿಂದ ಅದಕ್ಕೂ ಮುನ್ನವೇ ರಾಜಕೀಯ ಬೆಳವಣಿಗೆಗಳು ವೇಗ ಪಡೆದುಕೊಂಡಿವೆ.
ವಿಸಿಕೆ ಇನ್ನೂ ಅಧಿಕೃತ ಪ್ರಕಟಣೆ ನೀಡದಿದ್ದರೂ, ಟಿವಿಕೆ ಸರ್ಕಾರದ ಭವಿಷ್ಯವನ್ನು ನಿರ್ಧರಿಸುವ ‘ಕಿಂಗ್‌ಮೇಕರ್’ ಪಾತ್ರವನ್ನು ವಿಸಿಕೆ ನಿರ್ವಹಿಸಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.



