ಬೆಂಗಳೂರು: ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಿಎಂಟಿಸಿ ಬಸ್ ಶಿವ ದೇವಸ್ಥಾನಕ್ಕೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ಬೃಂದಾವನ ಬಸ್ ನಿಲ್ದಾಣದ ಬಳಿ ನಡೆದಿದೆ.
ಇಂದು ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಈ ಅವಘಡ ಸಂಭವಿಸಿದೆ. ಘಟಕ-9ಕ್ಕೆ ಸೇರಿದ ಬಿಎಂಟಿಸಿ ಬಸ್ 8ನೇ ಮೈಲಿಯಿಂದ ಹೇರೋಹಳ್ಳಿ ಕ್ರಾಸ್ ಕಡೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ಎದುರಿನಿಂದ ಬೈಕ್ ಬಂದಿರುವುದಾಗಿ ತಿಳಿದುಬಂದಿದೆ.
ಬೈಕ್ ಸವಾರನಿಗೆ ಡಿಕ್ಕಿ ಹೊಡೆಯದಂತೆ ಬಸ್ ಚಾಲಕ ವಾಹನ ನಿಯಂತ್ರಿಸಲು ಯತ್ನಿಸಿದಾಗ, ಬಸ್ ರಸ್ತೆ ಬದಿಯಲ್ಲಿದ್ದ ಶಿವ ದೇಗುಲಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ಪರಿಣಾಮ ದೇವಸ್ಥಾನದ ಕಾಂಪೌಂಡ್ ಹಾಗೂ ಗ್ರಿಲ್‌ಗೆ ಹಾನಿಯಾಗಿದೆ. ಬೈಕ್ ಸವಾರನ ಬಲಗೈಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಬಸ್ ಚಾಲಕ ಹಾಗೂ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.



