ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತಿ ವೇತನದಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ತುಟ್ಟಿ ಭತ್ಯೆ (ಡಿಎ)ಯನ್ನು ಶೇ.1.50ರಷ್ಟು ಹೆಚ್ಚಿಸಿ ಅಧಿಕೃತ ಆದೇಶ ಹೊರಡಿಸಿದೆ.
ಈ ಆದೇಶದಂತೆ 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ 2026ರ ಜನವರಿ 1ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆಯನ್ನು ಹಾಲಿ ಶೇ.14.25ರಿಂದ ಶೇ.15.75ಕ್ಕೆ ಪರಿಷ್ಕರಿಸಿ ಮಂಜೂರು ಮಾಡಲಾಗಿದೆ.
ಇದಕ್ಕೂ ಮೊದಲು ಕೇಂದ್ರ ಸರ್ಕಾರ ಏಪ್ರಿಲ್ ತಿಂಗಳಲ್ಲಿ ತನ್ನ ನೌಕರರಿಗೆ ಶೇ.2ರಷ್ಟು ತುಟ್ಟಿ ಭathyೆ ಹೆಚ್ಚಳ ಘೋಷಿಸಿತ್ತು. ಇದೀಗ ರಾಜ್ಯ ಸರ್ಕಾರವೂ ತನ್ನ ನೌಕರರಿಗೆ ಡಿಎ ಏರಿಕೆ ನೀಡಿ ಅಧಿಕೃತ ಆದೇಶ ಪ್ರಕಟಿಸಿದೆ.
ಸರ್ಕಾರದ ಆದೇಶದ ಪ್ರಕಾರ, ತುಟ್ಟಿ ಭತ್ಯೆ ಲೆಕ್ಕಾಚಾರದ ಉದ್ದೇಶಕ್ಕಾಗಿ ಮೂಲ ವೇತನದಲ್ಲಿ ನೌಕರರು ತಮ್ಮ ಹುದ್ದೆಗೆ ಅನುಗುಣವಾಗಿ ಪಡೆಯುತ್ತಿರುವ ವೇತನದ ಜೊತೆಗೆ, 2024ರ ಪರಿಷ್ಕೃತ ವೇತನ ಶ್ರೇಣಿಯ ಗರಿಷ್ಠ ಮಿತಿಗಿಂತ ಹೆಚ್ಚಾಗಿ ನೀಡಲಾದ ಸ್ಥಗಿತ ವೇತನ ಬಡ್ತಿಯನ್ನೂ ಪರಿಗಣಿಸಲಾಗುತ್ತದೆ.
ಇದಲ್ಲದೆ, ಕರ್ನಾಟಕ ನಾಗರಿಕ ಸೇವಾ ಪರಿಷ್ಕೃತ ವೇತನ ನಿಯಮಗಳಡಿ ಮಂಜೂರಾದ ವೈಯಕ್ತಿಕ ವೇತನ ಹಾಗೂ ಹೆಚ್ಚುವರಿ ವೇತನ ಬಡ್ತಿಗಳನ್ನು ಕೂಡ ಸೇರಿಸಿ ಅದರ ಮೇಲೆ ತುಟ್ಟಿ ಭತ್ಯೆ ಲೆಕ್ಕ ಹಾಕಲಾಗುತ್ತದೆ.
ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರು, ಹಾಗೆಯೇ ರಾಜ್ಯದ ಸಂಚಿತ ನಿಧಿಯಿಂದ ಪಿಂಚಣಿ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರಿಗೂ ಈ ಡಿಎ ಹೆಚ್ಚಳ ಅನ್ವಯವಾಗಲಿದೆ.
ಇವರಿಗೆ ಸಹ 2026ರ ಜನವರಿ 1ರಿಂದಲೇ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯನ್ನು ಹಾಲಿ ಶೇ.14.25ರಿಂದ ಶೇ.15.75ಕ್ಕೆ ಹೆಚ್ಚಿಸಲಾಗಿದೆ.
ಯುಜಿಸಿ, ಎಐಸಿಟಿಇ ಹಾಗೂ ಐಸಿಎಆರ್ ವೇತನ ಶ್ರೇಣಿಯ ನಿವೃತ್ತ ನೌಕರರಿಗೂ ಈ ಪರಿಷ್ಕರಣೆ ಅನ್ವಯವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸರ್ಕಾರದ ಮತ್ತು ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರು, ಕಾಲಿಕ ವೇತನ ಶ್ರೇಣಿಯ ಪೂರ್ಣಾವಧಿ ವರ್ಕ್‌ಚಾರ್ಜ್ ನೌಕರರು ಹಾಗೂ ಸರ್ಕಾರದಿಂದ ಸಹಾಯಧನ ಪಡೆಯುವ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಪೂರ್ಣಾವಧಿ ಸಿಬ್ಬಂದಿಗೂ ಈ ಆದೇಶ ಅನ್ವಯಿಸುತ್ತದೆ.
ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಹಾಗೂ ಎನ್‌ಜೆಪಿಸಿ ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಹೆಚ್ಚುವರಿ ತುಟ್ಟಿ ಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದು ರೂಪದಲ್ಲಿ ಪಾವತಿಸಲಾಗುತ್ತದೆ. ಜೊತೆಗೆ 50 ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಮುಂದಿನ ಪೂರ್ಣ ರೂಪಾಯಿಗೆ ಪರಿಗಣಿಸಲಾಗುವುದು, 50 ಪೈಸೆಗಿಂತ ಕಡಿಮೆ ಮೊತ್ತವನ್ನು ಕಡೆಗಣಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.



