ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೊಲ್ಕತ್ತಾ ಹೈಕೋರ್ಟ್ನಲ್ಲಿ ವಕೀಲರ ಉಡುಪಿನಲ್ಲಿ ಹಾಜರಾಗಿರುವ ಘಟನೆ ರಾಜಕೀಯ ಮತ್ತು ಕಾನೂನು ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮಮತಾ ಬ್ಯಾನರ್ಜಿ ಅವರು ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಲ್ಲಿ ಟಿಎಂಸಿ ಪರವಾಗಿ ವಾದ ಮಂಡಿಸಿದರೆಂದು ತಿಳಿದುಬಂದಿದೆ. ಅವರೊಂದಿಗೆ ಟಿಎಂಸಿ ಹಿರಿಯ ನಾಯಕರು ಹಾಗೂ ವಕೀಲರು ಕೂಡ ನ್ಯಾಯಾಲಯಕ್ಕೆ ಆಗಮಿಸಿದ್ದರು.
2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಬಳಿಕ ನಡೆದ ಹಿಂಸಾಚಾರದಲ್ಲಿ ಟಿಎಂಸಿ ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಲಾಗಿದ್ದು, ಈ ಕುರಿತು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಿತು.
ವಿಚಾರಣೆ ಬಳಿಕ ನ್ಯಾಯಾಲಯದ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಮತಾ ಬ್ಯಾನರ್ಜಿ ಅವರನ್ನು ಕೆಲ ವಕೀಲರು “ಕಳ್ಳಿ” ಎಂದು ಕರೆಯಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ನಂತರ ಅವರನ್ನು ಭದ್ರತೆಯೊಂದಿಗೆ ಕೋರ್ಟ್ ಆವರಣದಿಂದ ಹೊರತರಲಾಯಿತು ಎಂದು ವರದಿಯಾಗಿದೆ.
ಈ ನಡುವೆ ಮಮತಾ ಬ್ಯಾನರ್ಜಿ ಅವರ ಕಾನೂನು ಅರ್ಹತೆ ಹಾಗೂ ವಕೀಲರಾಗಿ ನೋಂದಣಿ ಕುರಿತು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ವಿವರ ಕೇಳಿದ್ದು, ಅವರ ವಕೀಲರ ದಾಖಲಾತಿ ಮತ್ತು ಅಭ್ಯಾಸಕ್ಕೆ ಸಂಬಂಧಿಸಿದ ಮಾಹಿತಿಯನ್ನು ಎರಡು ದಿನಗಳಲ್ಲಿ ಸಲ್ಲಿಸುವಂತೆ ರಾಜ್ಯ ಬಾರ್ ಕೌನ್ಸಿಲ್ಗೆ ಸೂಚಿಸಲಾಗಿದೆ.
ಮಮತಾ ಬ್ಯಾನರ್ಜಿ ಅವರ ಹೈಕೋರ್ಟ್ ಹಾಜರಾತಿ ಕುರಿತು ಉಂಟಾದ ವಿವಾದ ಇದೀಗ ಕಾನೂನು ಮತ್ತು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



