ಮಂಗಳೂರು: ಹವಾಮಾನ ವೈಪರಿತ್ಯದಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳು ತಕ್ಷಣ ಲ್ಯಾಂಡ್ ಆಗಲು ಸಾಧ್ಯವಾಗದೆ ಸುಮಾರು ಅರ್ಧಗಂಟೆ ಕಾಲ ಆಕಾಶದಲ್ಲೇ ಹಾರಾಟ ನಡೆಸಿದ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ವಿಮಾನ ನಿಲ್ದಾಣ ಪ್ರದೇಶದಲ್ಲಿಯೂ ಮಳೆಯ ಪರಿಣಾಮ ಲ್ಯಾಂಡಿಂಗ್ ಪ್ರಕ್ರಿಯೆ ವಿಳಂಬವಾಗಿದೆ ಎಂದು ತಿಳಿದುಬಂದಿದೆ. ಈ ಕಾರಣದಿಂದ ವಿಮಾನಗಳು ಲ್ಯಾಂಡ್ ಆಗಲು ಅವಕಾಶ ಸಿಗದೆ ಆಕಾಶದಲ್ಲೇ ಹಾರಾಟ ನಡೆಸಿವೆ.
ಸುಮಾರು 30 ನಿಮಿಷಗಳ ಬಳಿಕ ಹವಾಮಾನದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಎರಡೂ ವಿಮಾನಗಳನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ವೇಳೆ ವಿಟ್ಲ ಸುತ್ತಮುತ್ತ ಕಡಿಮೆ ಎತ್ತರದಲ್ಲಿ ವಿಮಾನಗಳು ಹಾರಾಟ ನಡೆಸಿದ ಕಾರಣ ಸ್ಥಳೀಯ ಜನರಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿದೆ ಎಂದು ವರದಿಯಾಗಿದೆ. ನಂತರ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ತಿಳಿದುಬಂದಿದೆ.



