ಮಡಿಕೇರಿ: ಮಧ್ಯಪ್ರಾಚ್ಯದಲ್ಲಿನ ಅಶಾಂತಿ ಹಾಗೂ ಜಾಗತಿಕ ತೈಲ ಕೊರತೆಯ ಆತಂಕದ ನಡುವೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಮಿತವ್ಯಯದ ಕರೆಗೆ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಸ್ಪಂದಿಸಿದ್ದಾರೆ.
ಸರ್ಕಾರದಿಂದ ಕ್ಯಾಬಿನೆಟ್ ದರ್ಜೆಯ ಭದ್ರತೆ ಪಡೆದಿರುವ ಪೊನ್ನಣ್ಣ, ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲು ಸೂಚನೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ತೈಲ ಅಭಾವದ ಸಾಧ್ಯತೆಯಿಂದ ದೇಶದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಇಂಧನ ಉಳಿತಾಯದ ದೃಷ್ಟಿಯಿಂದ ಅನಗತ್ಯ ವಾಹನ ಬಳಕೆಯನ್ನು ತಗ್ಗಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಭದ್ರತಾ ವಾಹನಗಳ ಬಳಕೆಯನ್ನು ಕಡಿಮೆ ಮಾಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿರುವುದಾಗಿ ಪೊನ್ನಣ್ಣ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಮಿತವ್ಯಯದ ಕರೆ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ವಲಯದಲ್ಲಿ ಇದು ಗಮನ ಸೆಳೆಯುವ ಬೆಳವಣಿಗೆಯಾಗಿದೆ.



