ಬೆಂಗಳೂರು: ಜಿಬಿಎ ಚುನಾವಣೆ ಘೋಷಣೆಯಾಗಿರುವ ಸಂದರ್ಭದಲ್ಲೇ ಜಯನಗರದಲ್ಲಿ ಬಿಜೆಪಿ ಮುಖಂಡ ಸೋಮಶೇಖರ್ ರೆಡ್ಡಿ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಜೂನ್ 24ರ ಸಂಜೆ ಜಯನಗರ 9ನೇ ಬ್ಲಾಕ್ನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಬಳಿ ಈ ಘಟನೆ ನಡೆದಿದ್ದು, ಸೋಮಶೇಖರ್ ರೆಡ್ಡಿ ಕೆಲಸ ಸಂಬಂಧ ಸ್ಥಳಕ್ಕೆ ಬಂದಿದ್ದ ವೇಳೆ ಆಟೋದಲ್ಲಿ ಆಗಮಿಸಿದ ಐವರ ಗುಂಪು ಅವರೊಂದಿಗೆ ಗಲಾಟೆ ನಡೆಸಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಆರೋಪಿಗಳು ಚಾಕುವಿನಿಂದ ಹೊಟ್ಟೆ, ಎದೆ ಹಾಗೂ ಬೆನ್ನಿಗೆ ಇರಿದಿದ್ದಾರೆ ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡ ಅವರನ್ನು ಸ್ಥಳೀಯರು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರವಿ, ಬಾಲು, ಪುಲಿ, ವಿಷ್ಣು ಹಾಗೂ ಶಂಕರ್ ಎಂಬ ಐವರನ್ನು ಬಂಧಿಸಿದ್ದಾರೆ.
ಸೋಮಶೇಖರ್ ರೆಡ್ಡಿ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದು, ಮುಂಬರುವ ಜಿಬಿಎ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಹಲ್ಲೆಯ ಹಿಂದೆ ರಾಜಕೀಯ ಕಾರಣಗಳ ಶಂಕೆಯೂ ವ್ಯಕ್ತವಾಗಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.



