ಬೆಂಗಳೂರು: ನಿನ್ನೆ ಸಂಜೆ ಜೆಪಿ ನಗರ ಐಜಿ ಸರ್ಕಲ್ ಬಳಿ ರೌಡಿಶೀಟರ್ ಒಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ ಘಟನೆ ನಡೆದಿದೆ.
ಸಂಜೆ ಟೀ ಕುಡಿದು ಮನೆಗೆ ಹೋಗುತ್ತಿದ್ದ ರಾಜು ಅಲಿಯಾಸ್ ಹಲ್ಮುರ್ಕ್ ರಾಜಾ ಮೇಲೆ ದುಷ್ಕರ್ಮಿಗಳು ಜನಸಂದಣಿ ನಡುವೆ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ರಾಜು ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮೃತ ರಾಜು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಸುಮಾರು 10 ವರ್ಷಗಳ ಹಿಂದೆ ಬನಶಂಕರಿಯಲ್ಲಿ ನಡೆದ ರೌಡಿ ಕುಟ್ಟಿ ಅಲಿಯಾಸ್ ಸ್ಟ್ಯಾಂಡ್ ಕುಟ್ಟಿ ಕೊಲೆ ಪ್ರಕರಣದಲ್ಲಿಯೂ ಅವನು ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಅವನು ಜೈಲು ಶಿಕ್ಷೆ ಅನುಭವಿಸಿದ್ದನು.
ಅಲ್ಲದೆ, ಸುಬ್ರಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣದಲ್ಲಿಯೂ ಅವನ ಹೆಸರು ಕೇಳಿಬಂದಿದೆ. ರಾಜು ದಕ್ಷಿಣ ಬೆಂಗಳೂರಿನ ರೌಡಿ ಅರಸಯ್ಯನ ಗುಂಪಿನಲ್ಲಿದ್ದನೆಂದು ಪೊಲೀಸರು ಶಂಕಿಸಿದ್ದಾರೆ.
ಹಳೆಯ ವೈಷಮ್ಯವೇ ಈ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಪ್ರಾಥಮಿಕವಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಸಂಜೆ ಸುಮಾರು 5:30ಕ್ಕೆ ನಡೆದಿದೆ.
ಘಟನೆಯ ಬಳಿಕ ಜೆಪಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಟ್ ಸಂತೋಷ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.



