ಕಲಬುರಗಿ: ವಾಹನ ಓವರ್‌ಟೇಕ್ ಮಾಡುವ ವಿಚಾರಕ್ಕೆ ಆರಂಭವಾದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಉಡಗಿ ಗ್ರಾಮದಲ್ಲಿ ನಡೆದಿದೆ. ಜೆಸಿಬಿ ಚಾಲಕನೊಬ್ಬ ಯುವಕನಿಗೆ ಹೊಡೆದಿದ್ದು, ಹೊಡೆತದ ರಭಸಕ್ಕೆ ಯುವಕ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಮೃತ ಯುವಕನನ್ನು ಉಡಗಿ ಗ್ರಾಮದ ಭಾಗ್ಯವಂತ (24) ಎಂದು ಗುರುತಿಸಲಾಗಿದೆ. ವಾಹನ ಓವರ್‌ಟೇಕ್ ಮಾಡುವ ವಿಚಾರಕ್ಕೆ ಭಾಗ್ಯವಂತ ಹಾಗೂ ಜೆಸಿಬಿ ಚಾಲಕ ನಬೀ ನಡುವೆ ಜಗಳ ಆರಂಭವಾಗಿತ್ತು.
ಮಾತಿಗೆ ಮಾತು ಬೆಳೆದು ಜಗಳ ತೀವ್ರಗೊಂಡ ವೇಳೆ ಭಾಗ್ಯವಂತ, ನಬೀ ಅವರ ಶರ್ಟ್‌ನ ಕಾಲರ್ ಹಿಡಿದಿದ್ದಾನೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ನಬೀ, ಭಾಗ್ಯವಂತನ ಕೆನ್ನೆಗೆ ಜೋರಾಗಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.
ಹೊಡೆತದ ರಭಸಕ್ಕೆ ಭಾಗ್ಯವಂತನ ಕೆನ್ನೆಗೆ ಗಂಭೀರ ಪೆಟ್ಟಾಗಿದ್ದು, ಕೂಡಲೇ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಘಟನೆ ಬಳಿಕ ಸೇಡಂ ಪೊಲೀಸರು ಆರೋಪಿ ನಬೀಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವಾಹನ ಓವರ್‌ಟೇಕ್ ವಿಚಾರಕ್ಕೆ ಆರಂಭವಾದ ಕ್ಷುಲ್ಲಕ ಜಗಳ ಯುವಕನ ಸಾವಿನಲ್ಲಿ ಅಂತ್ಯವಾಗಿರುವುದು ಗ್ರಾಮದಲ್ಲಿ ಆತಂಕ ಮೂಡಿಸಿದೆ.



