ಶಿವಮೊಗ್ಗ: ನಗರದ ವಿಶಾಲ್ ಮಾರ್ಟ್ ಕಟ್ಟಡದಲ್ಲಿ ಲಿಫ್ಟ್ ಹಠಾತ್ ಸ್ಥಗಿತಗೊಂಡ ಪರಿಣಾಮ 9 ಮಂದಿ ಗ್ರಾಹಕರು ಒಂದು ಗಂಟೆಗೂ ಹೆಚ್ಚು ಕಾಲ ಒಳಗೆ ಸಿಲುಕಿದ ಘಟನೆ ನಡೆದಿದೆ. ಅಗ್ನಿಶಾಮಕ ದಳದ ತ್ವರಿತ ಕ್ರಮದಿಂದ ಎಲ್ಲರೂ ಸುರಕ್ಷಿತವಾಗಿ ರಕ್ಷಿತರಾಗಿದ್ದಾರೆ.
ತಾಂತ್ರಿಕ ದೋಷದಿಂದ ಲಿಫ್ಟ್ ಮೊದಲ ಮಹಡಿಯಲ್ಲಿ ನಿಂತು ಹೋಗಿದ್ದು, ಒಳಗೆ ಭರತ್, ಅನುಷಾ, ಅನೀಸ್ ಫಾತಿಮಾ, ಮುಸರತ್, ಸೂಬಿಯಾ ಸೇರಿದಂತೆ ಒಟ್ಟು 9 ಮಂದಿ ಸಿಲುಕಿದ್ದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವರು ಲಿಫ್ಟ್‌ನಲ್ಲೇ ಸಿಲುಕಿಕೊಂಡಿದ್ದರು.
ಘಟನೆಯ ವೇಳೆ ಕೆಲವರು ಭಯಭೀತರಾಗಿ ಕೂಗಾಡಿದ್ದು, ಮಹಿಳೆಯೊಬ್ಬರ ಆರೋಗ್ಯಕ್ಕೂ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ತಂಡ ಹೈಡ್ರಾಲಿಕ್ ಉಪಕರಣಗಳನ್ನು ಬಳಸಿ ಲಿಫ್ಟ್ ತೆರೆಯುವ ಕಾರ್ಯಾಚರಣೆ ನಡೆಸಿದೆ. ನಂತರ ಒಳಗಿದ್ದ ಎಲ್ಲರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.
ಅಗ್ನಿಶಾಮಕ ದಳದ ತ್ವರಿತ ಕಾರ್ಯಾಚರಣೆ ಹಾಗೂ ಸಿಬ್ಬಂದಿಯ ಸಮಯೋಚಿತ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



