ಚೆನ್ನೈ: ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಅವರ ಐಪಿಎಲ್ ಭವಿಷ್ಯದ ಬಗ್ಗೆ ಮತ್ತೆ ಚರ್ಚೆಗಳು ಜೋರಾಗಿವೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಧೋನಿ, ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಮುಂದಿನ ಆವೃತ್ತಿಯಲ್ಲೂ ಅವರು ಆಡಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಕಳೆದ ಐದು ವರ್ಷಗಳಿಂದ ಧೋನಿ ನಿವೃತ್ತಿ ಕುರಿತ ಚರ್ಚೆಗಳು ನಡೆಯುತ್ತಲೇ ಇದ್ದರೂ, ಅವರು ಪ್ರತಿ ಬಾರಿ ಅಭಿಮಾನಿಗಳಿಗೆ ಅಚ್ಚರಿ ನೀಡುತ್ತಾ ತಂಡದೊಂದಿಗೆ ಮುಂದುವರಿದಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಚೆನ್ನೈ ತಂಡದ ಭಾಗವಾಗಿದ್ದರೂ, ಇದುವರೆಗೆ ಯಾವುದೇ ಪಂದ್ಯದಲ್ಲಿ ಮೈದಾನಕ್ಕಿಳಿದಿಲ್ಲ. ಇದರಿಂದ ಅವರ ಮುಂದಿನ ನಿರ್ಧಾರ ಕುರಿತು ಇನ್ನಷ್ಟು ಕುತೂಹಲ ಹೆಚ್ಚಾಗಿದೆ.
ಮೇ 18ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್‌ನ ತವರಿನ ಕೊನೆಯ ಪಂದ್ಯದಲ್ಲಿ ಧೋನಿ ಮೈದಾನಕ್ಕೆ ಬಂದು ಅಭಿಮಾನಿಗಳೊಂದಿಗೆ ಕ್ಷಣಗಳನ್ನು ಹಂಚಿಕೊಂಡರು. ಈ ವೇಳೆ ಅಭಿಮಾನಿಗಳಿಗೆ ಕೈಬೀಸುವುದರ ಜೊತೆಗೆ ಕೆಲವರಿಗೆ ಆಟೋಗ್ರಾಫ್ ನೀಡಿ, ಚೆಂಡುಗಳನ್ನು ಉಡುಗೊರೆಯಾಗಿ ನೀಡಿದರು.
ಈ ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ಧೋನಿ ಅವರ ಮಾಜಿ ಸಹ ಆಟಗಾರ ಹಾಗೂ ಚೆನ್ನೈ ಅಭಿಮಾನಿಗಳಲ್ಲಿ ‘ಚಿನ್ನ ಥಲಾ’ ಎಂದೇ ಪ್ರಸಿದ್ಧರಾಗಿರುವ ಸುರೇಶ್ ರೈನಾ, ಧೋನಿ ಅವರ ಮುಂದಿನ ಐಪಿಎಲ್ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.
ಮುಂದಿನ ವರ್ಷವೂ ಆಡಬೇಕು ಎಂದು ನಾನು ಧೋನಿಗೆ ಕೇಳಿದ್ದೆ. ಅದಕ್ಕೆ ಅವರು ‘ನನ್ನ ದೇಹ ಸ್ವಲ್ಪ ದಣಿದಂತೆ ಅನಿಸುತ್ತಿದೆ’ ಎಂದು ಹೇಳಿದರು. ಆದರೆ ನಾನು ನೀವು ಮುಂದಿನ ವರ್ಷವೂ ಆಡಲೇಬೇಕು ಎಂದು ಒತ್ತಾಯಿಸಿದ್ದೇನೆ ಎಂದು ರೈನಾ ಹೇಳಿದ್ದಾರೆ.
ಅಂತಿಮ ನಿರ್ಧಾರ ಧೋನಿ ಅವರದ್ದೇ ಆಗಿದ್ದು, ಅವರು ಮುಂದಿನ ಆವೃತ್ತಿಯಲ್ಲಿ ಆಡಲು ಸಿದ್ಧರಾಗಿರಬಹುದು ಎಂಬ ಭಾವನೆ ಇದೆ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.



