ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಭವಿಸಿದ ಭಾರೀ ಬಿರುಗಾಳಿ ಸಹಿತ ಮಳೆಯಿಂದ ಅನೇಕ ಮನೆಗಳು ಹಾನಿಗೊಳಗಾಗಿದ್ದು, ಮನೆ ಕಳೆದುಕೊಂಡ ನಿರಾಶ್ರಿತ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಖಾಯಂ ವಸತಿ ಮನೆಗಳನ್ನು ಕಲ್ಪಿಸಬೇಕು ಎಂದು ಎಸ್‌ಡಿಪಿಐ ಪಕ್ಷದ ಗದಗ ವಿಧಾನಸಭಾ ಮತಕ್ಷೇತ್ರ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಎಸ್‌ಡಿಪಿಐ ಪಕ್ಷದ ಗದಗ ವಿಧಾನಸಭಾ ಮತಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ನಗರದ ಗಾಂಧಿ ವೃತ್ತದಿಂದ ಗದಗ-ಬೆಟಗೇರಿ ನಗರಸಭೆ ಕಚೇರಿವರೆಗೆ ಪಾದಯಾತ್ರೆ ನಡೆಸಲಾಯಿತು. ಪ್ರತಿಭಟನಾಕಾರರು ನಗರಸಭೆ ಆಡಳಿತ ವ್ಯವಸ್ಥೆ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪೌರಾಯುಕ್ತರಿಗೆ ಮನವಿ ಸಲ್ಲಿಸಿ, ಬಿರುಗಾಳಿ ಹಾಗೂ ಮಳೆಯಿಂದ ಹಾನಿಗೊಂಡ ಮನೆಗಳಿಗೆ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕು. ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿಯನ್ನು ಸರಿಪಡಿಸಿ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.
ನಗರಾದ್ಯಂತ ಬೀದಿ ದೀಪಗಳ ಅವ್ಯವಸ್ಥೆ ಹಾಗೂ ಕಳಪೆ ಮಟ್ಟದ ರಸ್ತೆಗಳ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ. ಗದಗ-ಬೆಟಗೇರಿ ನಗರಸಭೆ ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಇಲಾಖೆಗಳಿಂದ ತ್ವರಿತ ಕಾರ್ಯಾಚರಣೆ ನಡೆಸಬೇಕು ಎಂದು ಮನವಿ ಮುಖಾಂತರ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಗದಗ ವಿಧಾನಸಭಾ ಮತಕ್ಷೇತ್ರ ಸಮಿತಿ ಅಧ್ಯಕ್ಷ ಮುಸ್ತಾಕ್ ಹೊಸಮನಿ, ಕಾರ್ಯದರ್ಶಿ ಸಮೀರ್ ಕೊಟ್ಟೂರು, ಇಬ್ರಾಹಿಂ ಕುಂದರಪಿ, ಜಿಲ್ಹಾನಿ ಲಕ್ಕುಂಡಿ, ರಶೀದ್ ಕಟ್ಟಿಮನಿ, ಗದಗ ಜಿಲ್ಲಾ ಸಮಿತಿ ಉಪಾಧ್ಯಕ್ಷ ಹಾಗೂ ಹಿರಿಯ ಮುಖಂಡ ಹಿದಾಯತುಲ್ಲಾ ಕಾಗದಗಾರ, ವಿಮೆನ್ ಇಂಡಿಯಾ ಮೂವ್ಮೆಂಟ್ ಅಧ್ಯಕ್ಷೆ ಸುಮಯ್ಯ ಬಳ್ಳಾರಿ, ಗಂಗಿಮಡಿ ಸಾರ್ವಜನಿಕರು, ಸಂತ್ರಸ್ತರು ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಉಪಸ್ಥಿತರಿದ್ದರು.
“ಪ್ರಕೃತಿ ವಿಕೋಪಕ್ಕೊಳಗಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಖಾಯಂ ವಸತಿ ಹಾಗೂ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕು.”
ಮುಷ್ತಾಕ್ ಹೊಸಮನಿ, ಎಸ್‌ಡಿಪಿಐ ಮುಖಂಡ



