ಬಾಲಿವುಡ್‌ನಲ್ಲಿ ಮತ್ತೊಂದು ದೊಡ್ಡ ವಿವಾದಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಸಲ್ಮಾನ್ ಖಾನ್ ಅವರ ಬಹುಚರ್ಚಿತ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿ ನಿರ್ಮಾಣವಾಗುತ್ತಿರುವ ‘ಕಾಲಾ ಹಿರನ್: ದಿ ಬ್ಯಾಟಲ್ ಆಫ್ ಲೆಗಸಿ’ ಸಿನಿಮಾ ಈಗಾಗಲೇ ಬಿಡುಗಡೆಯಾದ ಪೋಸ್ಟರ್‌ನಿಂದಲೇ ಭಾರೀ ಚರ್ಚೆಗೆ ಕಾರಣವಾಗಿದೆ.
ಚಿತ್ರದ ಪೋಸ್ಟರ್‌ನಲ್ಲಿ ಸಲ್ಮಾನ್ ಖಾನ್ ಅವರನ್ನು ಹೋಲುವ ವ್ಯಕ್ತಿಯೊಬ್ಬ ರೈಫಲ್ ಹಿಡಿದು ಕಾಣಿಸಿಕೊಂಡಿದ್ದು, ಅವರ ಟ್ರೇಡ್‌ಮಾರ್ಕ್ ಬ್ರೇಸ್ಲೆಟ್ ಮಾದರಿಯ ಆಭರಣವನ್ನೂ ಬಳಸಲಾಗಿದೆ. ಇದರಿಂದ ಸಿನಿಮಾ ನೇರವಾಗಿ ಸಲ್ಮಾನ್ ಖಾನ್ ಪ್ರಕರಣವನ್ನೇ ಕೇಂದ್ರೀಕರಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿವಾದಾತ್ಮಕ ವಿಷಯಗಳನ್ನು ತೆರೆಗೆ ತರುವ ಮೂಲಕ ಗುರುತಿಸಿಕೊಂಡಿರುವ ನಿರ್ಮಾಪಕ ಅಮಿತ್ ಜಾನಿ, ಈ ಚಿತ್ರ ನೈಜ ಘಟನೆಗಳು ಮತ್ತು ನ್ಯಾಯಾಂಗ ಪ್ರಕ್ರಿಯೆಗಳ ಆಧಾರದ ಮೇಲೆ ರೂಪುಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ಜೊತೆಗೆ, “ಇದು ದೇಶದ ಅತಿದೊಡ್ಡ ವಿವಾದಾತ್ಮಕ ಸಿನಿಮಾ ಆಗಲಿದೆ” ಎಂಬ ಹೇಳಿಕೆ ನೀಡಿ ಕುತೂಹಲ ಹೆಚ್ಚಿಸಿದ್ದಾರೆ.
ಮತ್ತೊಂದು ಪ್ರಮುಖ ಅಂಶವೆಂದರೆ, ಚಿತ್ರದಲ್ಲಿ ಕೃಷ್ಣಮೃಗ ಬೇಟೆ ಪ್ರಕರಣದ ಜೊತೆಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೆಸರು ಕೂಡ ಪ್ರಸ್ತಾಪವಾಗಲಿದೆಯಂತೆ. ಹೀಗಾಗಿ ಸಿನಿಮಾ ಬಿಡುಗಡೆಯ ಮುನ್ನವೇ ಹೊಸ ವಿವಾದಗಳು ಹುಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
‘ಉದಯಪುರ ಫೈಲ್ಸ್’ ಖ್ಯಾತಿಯ ಅಮಿತ್ ಜಾನಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಭರತ್ ಎಸ್. ಶ್ರೀನಾಥ್ ನಿರ್ದೇಶಿಸುತ್ತಿದ್ದು, ಜಾನಿ ಫೈರ್‌ಫಾಕ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಜೂನ್ 20ರಂದು ಬಿಡುಗಡೆಯಾಗಲಿರುವ ಟೀಸರ್ ಮೇಲೆ ಇದೀಗ ಬಾಲಿವುಡ್ ಹಾಗೂ ಅಭಿಮಾನಿಗಳ ಕಣ್ಣು ನೆಟ್ಟಿದೆ.



