ಕೌಲಾಲಂಪುರ್: ಮಕ್ಕಳಲ್ಲಿ ಹೆಚ್ಚುತ್ತಿರುವ ಸೋಷಿಯಲ್ ಮೀಡಿಯಾ ವ್ಯಸನ ಮತ್ತು ಆನ್‌ಲೈನ್ ಅಪಾಯಗಳನ್ನು ನಿಯಂತ್ರಿಸುವ ಉದ್ದೇಶದಿಂದ ಮಲೇಷ್ಯಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 16 ವರ್ಷದೊಳಗಿನ ಮಕ್ಕಳು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವುದನ್ನು ನಿಷೇಧಿಸಿದೆ.
ಹೊಸ ನಿಯಮದ ಪ್ರಕಾರ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್, ಯೂಟ್ಯೂಬ್ ಸೇರಿದಂತೆ ಯಾವುದೇ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಖಾತೆ ಹೊಂದಲು ಅವಕಾಶ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಬಳಕೆದಾರರ ವಯಸ್ಸು ಪರಿಶೀಲಿಸುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಸರ್ಕಾರ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸೂಚಿಸಿದೆ.
ನಿಯಮಗಳನ್ನು ಪಾಲಿಸದ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಸರ್ಕಾರ, ಗರಿಷ್ಠ 1 ಕೋಟಿ ರಿಂಗಿಟ್ (ಸುಮಾರು 23.95 ಕೋಟಿ ರೂಪಾಯಿ) ದಂಡ ವಿಧಿಸುವುದಾಗಿ ತಿಳಿಸಿದೆ.
ಮಕ್ಕಳನ್ನು ಹಾನಿಕಾರಕ ವಿಷಯಗಳು, ಸೈಬರ್ ಬುಲ್ಲಿಂಗ್, ಆನ್‌ಲೈನ್ ಶೋಷಣೆ ಹಾಗೂ ಅತಿಯಾದ ಸೋಷಿಯಲ್ ಮೀಡಿಯಾ ಬಳಕೆಯಿಂದ ರಕ್ಷಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಈ ನಿಯಮದಿಂದ ಮಕ್ಕಳಿಗೆ ಇಂಟರ್ನೆಟ್ ಅಥವಾ ಡಿಜಿಟಲ್ ತಂತ್ರಜ್ಞಾನ ಬಳಕೆಯ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಮಲೇಷ್ಯಾ ಸರ್ಕಾರ ಸ್ಪಷ್ಟಪಡಿಸಿದೆ. ಶಿಕ್ಷಣ, ಅಧ್ಯಯನ ಹಾಗೂ ಇತರ ಅಗತ್ಯ ಡಿಜಿಟಲ್ ಸೇವೆಗಳನ್ನು ಮಕ್ಕಳು ಬಳಸಬಹುದಾಗಿದೆ.
ಇದಲ್ಲದೆ, ಸಾಮಾಜಿಕ ಜಾಲತಾಣ ಸಂಸ್ಥೆಗಳು ಅಪ್ರಾಪ್ತ ವಯಸ್ಕರ ಸುರಕ್ಷತೆಯನ್ನು ಖಚಿತಪಡಿಸಲು ವಿಶೇಷ ಭದ್ರತಾ ಕ್ರಮಗಳನ್ನು ಜಾರಿಗೆ ತರಬೇಕು. ಮಕ್ಕಳಿಗೆ ಹಾನಿಕಾರಕವಾಗುವ ವಿಷಯಗಳನ್ನು ನಿಯಂತ್ರಿಸುವುದು ಹಾಗೂ ನಕಲಿ ಅಥವಾ ಅನಧಿಕೃತ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿರಲಿದೆ ಎಂದು ಸರ್ಕಾರ ಸೂಚಿಸಿದೆ.
ಗಮನಾರ್ಹ ಸಂಗತಿಯೆಂದರೆ, ಮಕ್ಕಳ ಆನ್‌ಲೈನ್ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಆಸ್ಟ್ರೇಲಿಯಾ, ಬ್ರೆಜಿಲ್, ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳು ಈಗಾಗಲೇ ಇಂತಹ ನಿಯಮಗಳನ್ನು ಜಾರಿಗೆ ತಂದಿವೆ. ಇದೀಗ ಮಲೇಷ್ಯಾ ಕೂಡ ಆ ಸಾಲಿಗೆ ಸೇರ್ಪಡೆಯಾಗಿದೆ.



