ಚಿಕ್ಕೋಡಿ: ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆಯುತ್ತಿದ್ದ ಹೈಟೆಕ್ ಅಕ್ರಮ ಕಳ್ಳಬಟ್ಟಿ ದಂಧೆಯ ಜಾಲವನ್ನು ಕುಡಚಿ ಪೊಲೀಸರು ಭೇದಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಿಢೀರ್ ದಾಳಿ ನಡೆಸಿದ ಪೊಲೀಸರು ಅಕ್ರಮ ಕಳ್ಳಬಟ್ಟಿ ಅಡ್ಡೆಯನ್ನು ಪತ್ತೆಹಚ್ಚಿ ಭಾರೀ ಪ್ರಮಾಣದ ಮದ್ಯ ತಯಾರಿಕಾ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ದಾಳಿಯ ವೇಳೆ ಒಟ್ಟು 1,790 ಲೀಟರ್ ಬೆಲ್ಲದ ಕೊಳೆ (ಕಚ್ಚಾ ವಸ್ತು) ಹಾಗೂ 10 ಲೀಟರ್ ತಯಾರಾಗಿದ್ದ ಕಳ್ಳಬಟ್ಟಿ ಸಾರಾಯಿ ಸೇರಿದಂತೆ ಒಟ್ಟು 1,800 ಲೀಟರ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯಲ್ಲಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



