ನೆಲಮಂಗಲ: ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡಹಳ್ಳಿಯಲ್ಲಿ ನಡೆದಿದೆ.
ಲಿಕ್ಷಿತಾ (3) ಮೃತ ಬಾಲಕಿ. ಮಗುವಿನ ಸಾವಿನ ಹಿಂದೆ ಮಲತಾಯಿ ಗಿರಿಜಾ ಕೈವಾಡವಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಮಗುವಿನ ದೇಹದ ಮೇಲೆ ಬರೆ ಹಾಗೂ ಗಾಯದ ಗುರುತುಗಳು ಪತ್ತೆಯಾಗಿರುವುದು ಸಾವಿನ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆ ಬಳಿಕ ಆಕ್ರೋಶಗೊಂಡ ಕುಟುಂಬಸ್ಥರು ಗಿರಿಜಾ ಮೇಲೆ ಹಲ್ಲೆಗೆ ಮುಂದಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಮೃತ ಬಾಲಕಿಯ ತಾಯಿ ಅನಾರೋಗ್ಯದಿಂದ ಮೃತಪಟ್ಟ ಬಳಿಕ ತಂದೆ ಜಗದೀಶ್, ಗಿರಿಜಾ ಜೊತೆ ವಾಸವಾಗಿದ್ದರು ಎನ್ನಲಾಗಿದೆ. ಜಗದೀಶ್ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಸುಮಾರು 20 ದಿನಗಳಿಂದ ಗಿರಿಜಾ ಹಾಗೂ ಲಿಕ್ಷಿತಾ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಗಿರಿಜಾ ಅವರಿಗೂ ಈ ಹಿಂದೆ ಮದುವೆಯಾಗಿತ್ತು ಎನ್ನಲಾಗಿದ್ದು, ಬಳಿಕ ಜಗದೀಶ್ ಜೊತೆ ವಾಸವಾಗಿದ್ದರು. ಇಬ್ಬರೂ ಗಂಡ-ಹೆಂಡತಿ ಎಂದು ಹೇಳಿಕೊಂಡು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು ಎನ್ನಲಾಗಿದೆ.
ಮೂರು ವರ್ಷದ ಬಾಲಕಿಯ ಅನುಮಾನಾಸ್ಪದ ಸಾವಿನಿಂದ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಲತಾಯಿಯೇ ಮಗುವನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಮನೆ ಬಳಿ ಗಲಾಟೆ ಉಂಟಾಗಿ, ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆಯನ್ನು ನಿಯಂತ್ರಿಸಿದ್ದಾರೆ.
ಮಗುವಿನ ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಘಟನೆ ಸಂಬಂಧ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.



